

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದಲ್ಲಿ ಕಾನೂನು ರೀತಿ ರಸ್ತೆ ವಿಸ್ತರಿಸಲಿ. ಅದೇ ರೀತಿ ತೆರವುಗೊಳಿಸಿದ ಕಟ್ಟಡಗಳ ಮಾಲೀಕರಿಗೂ ಸೂಕ್ತ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಎಚ್.ಎನ್.ಪ್ರಶಾಂತ್ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯೂರಿನಲ್ಲಿ 70 ಅಡಿ ಅಗಲದಷ್ಟು ರಸ್ತೆ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದರಿಂದ ಹಲವರ ಅಂಗಡಿ-ಮುಂಗಟ್ಟು, ಕಾಂಪ್ಲೆಕ್ಸ್, ಮನೆಗಳು ತೆರವಾಗಲಿದೆ. ಇವ್ಯಾವು ಬೇನಾಮಿ ಆಸ್ತಿಗಳಲ್ಲ. ತಾತ, ಮುತ್ತಾತರ ಕಾಲದ್ದಾಗಿವೆ ಎಂದರು.
ಇಲ್ಲಿನ ನಗರಸಭೆ ಬೇನಾಮಿ ಆಸ್ತಿ ಎಂದು ಪರಿಗಣಿಸಿ, ಯಾವುದೇ ನೋಟಿಸ್ ನೀಡದೆ, ಆಟೋಗಳ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ರಸ್ತೆ ವಿಸ್ತರಣೆಗೆ ಕಟ್ಟಡಗಳ ಮಾಲೀಕರ ವಿರೋಧವಿಲ್ಲ. ಆದರೆ, ಆಗುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಿ ನಂತರ ತೆರವು ಕಾರ್ಯಾಚರಣೆ ನಡೆಸಲಿ ಎಂದು ಆಗ್ರಹಿಸಿದರು.
ಪರಿಹಾರ ನೀಡದಿದ್ದರೆ, ನಮ್ಮೆಲ್ಲರ ಬದುಕು ಬೀದಿಗೆ ಬೀಳಲಿದೆ. ಅಂಗಡಿಗಳ ಬಾಡಿಗೆ, ವ್ಯಾಪಾರ ನಂಬಿಕೊಂಡು ಜೀವನ ನಡೆಸಲಾಗುತ್ತಿದೆ. 70 ಅಡಿ ಅಗಲ ಬದಲು 35ರಿಂದ 40 ಅಡಿ ವಿಸ್ತರಿಸಿದರೆ, ಅನೇಕರಿಗೆ ಅನುಕೂಲವಾಗಲಿದೆ ಎಂದರು.
ಜಿ.ಎಸ್.ಕಿರಣ್ ಮಾತನಾಡಿ, ರಸ್ತೆ ವಿಸ್ತರಣೆ ವಿಚಾರದಲ್ಲಿ ಮಾಲೀಕರಿಗೆ ಅನ್ಯಾಯವಾಗುತ್ತಿದೆ. 1956-57ರಲ್ಲೇ ಈ ಆಸ್ತಿಗಳನ್ನು ಜಿಲ್ಲಾಧಿಕಾರಿ ಮೂಲಕ ಸೇಲ್ ಡೀಡ್‌ನೊಂದಿಗೆ ಖರೀದಿಸಲಾಗಿದೆ. ಹೀಗಿದ್ದರೂ ಯಾವ ಸೂಚನೆ ನೀಡದೆಯೇ ತೆರವುಗೊಳಿಸಲು ಆದೇಶಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಟ್ಟಡಗಳ ಮಾಲೀಕರಾದ ರಾಘವೇಂದ್ರ, ವೆಂಕಟೇಶ್, ಮಂಜುನಾಥ್, ಚೇತನ್, ಪ್ರಭಾಕರ್, ಸುರೇಶ್, ಕಮಲೇಶ್,
ರಾಧಿಕಾ, ಶಿವಕುಮಾರ್, ಚಂದ್ರಕೀರ್ತಿ, ಗುರುಕಿರಣ್, ಸತ್ಯನಾರಾಯಣ ಇತರರಿದ್ದರು.