ರಸ್ತೆ ವಿಸ್ತರಣೆಗೆ ದೃಢ ನಿರ್ಧಾರ

MLA
Published on

ಚಿತ್ರದುರ್ಗ: ಜಿಲ್ಲಾ ಕೇಂದ್ರವಾದ ಕೋಟೆನಗರಿಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕೆಂಬ ಉದ್ದೇಶವಿದ್ದು, ಆ ನಿಟ್ಟಿನಲ್ಲಿ ನಮ್ಮದು ಮೊದಲ ಆದ್ಯತೆಯಾಗಿದೆ. ಆದರೆ, ಇಲ್ಲಿ ನೋಡಿದರೆ ಕಿಷ್ಕಿಂಧೆಯಂತಿರುವ ರಸ್ತೆಗಳಿಂದಾಗಿ ಸರ್ಕಾರದ ಗಮನ ಸೆಳೆಯುವುದಾದರೂ ಹೇಗೆ?. ಮುಖ್ಯ ಮಾರ್ಗಗಳನ್ನು ವಿಸ್ತರಿಸಲು ಕೂಡಲೇ ಹತ್ತನೆರಡು ದಿನದೊಳಗೆ ಮೂಲ ನೀಲಿ ನಕ್ಷೆ, ದಾಖಲಾತಿ ಸಂಗ್ರಹಿಸಿ, ನನಗೆ ಸಲ್ಲಿಸಿ...

ರಸ್ತೆ ವಿಸ್ತರಣೆ ಸಂಬಂಧ ನಗರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚಿಸಿದ ಪರಿ ಇದು.

ಮೊದಲ ಹಂತದಲ್ಲಿ ನಗರದ ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೆ ರಸ್ತೆಯ ಮಧ್ಯಭಾಗದಿಂದ 21 ಮೀಟರ್ ವಿಸ್ತರಿಸಲು ಈಗಾಗಲೇ ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ದಾವಣಗೆರೆ ರಸ್ತೆ, ಮೂರನೇ ಹಂತದಲ್ಲಿ ಜೆಸಿಆರ್ ರಸ್ತೆ ವಿಸ್ತರಿಸಬೇಕಿದೆ. ಅದಕ್ಕಾಗಿ ದಾಖಲಾತಿ ಕ್ರೋಢೀಕರಣದ ಬಳಿಕ ಅಂತಿಮವಾಗಿ ಅಳತೆಯ ಕುರಿತು ತೀರ್ಮಾನಿಸಲಾಗುವುದು. ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಕಾರ್ಯ ಕೈಗೊಳ್ಳುವುದು ಖಚಿತ ಎಂದು ಭರವಸೆ ನೀಡಿದರು.

ಕಾನೂನು ತೊಡಕು ಉಂಟಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಅದಕ್ಕೆ ಪೂರಕವಾದ ಸೂಕ್ತ ದಾಖಲೆ, ನಕ್ಷೆಗಳ ಮೂಲ ಪ್ರತಿಗಳನ್ನು ಸಂಗ್ರಹಿಸಿ. ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ ಎಂದರು.

ಈಗಿನ ಮುಖ್ಯ ರಸ್ತೆ ಮೊದಲು ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಹೀಗಾಗಿ ರಸ್ತೆಗೆ ಸಂಬಂಧಿಸಿದ ದಾಖಲೆ ಹಾಗೂ ನಕ್ಷೆಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಲಭ್ಯವಿರುವ ಸಾಧ್ಯತೆಗಳಿವೆ. ಅಲ್ಲಿನ ಅಧಿಕಾರಿಗಳನ್ನು ಒಮ್ಮೆ ವಿಚಾರಿಸಿ ಎಂದು ಸಲಹೆ ನೀಡಿದರು.

ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಲು ಅವಕಾಶವಿದೆ. ಆಗ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆಯಾಗಲಿದೆ. ಆದ್ದರಿಂದ ನಗರಸಭೆ ಅಧ್ಯಕ್ಷರು ಇದನ್ನು ಸದ್ಬಳಕೆ ಮಾಡಿಕೊಂಡು ರಸ್ತೆ ವಿಸ್ತರಣೆಗೆ ಕೈಜೋಡಿಸಿ ಎಂದು ಕಿವಿಮಾತು ಹೇಳಿದರು.

ಎಂಎಲ್ಸಿ ಕೆ.ಎಸ್.ನವೀನ್ ಅವರು ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ವಿಸ್ತರಣೆ ವಿಚಾರ ಮುನ್ನಲೆಗೆ ಬಂದಿರುವುದು ಸ್ವಾಗತಾರ್ಹ. ಆದರೆ, ಯಾವ ರೀತಿಯಲ್ಲೂ ಕಾನೂನು ತೊಡಕು ಬಾರದಂತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಲು ಸಲಹೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

ನಗರದಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ, ಪಾರ್ಕಿಂಗ್, ಮುಖ್ಯ ರಸ್ತೆಯಲ್ಲಿನ ವ್ಯಾಪಾರ-ವಹಿವಾಟು, ಸರಕು ವಾಹನಗಳ ನಿಲುಗಡೆ, ಸಂಚಾರ ನಿಯಮಗಳ ಪಾಲನೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಎಂಎಲ್ಸಿ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ಸುಮಿತಾ, ಪೌರಾಯುಕ್ತೆ ಎಂ.ರೇಣುಕಾ, ಕಾನೂನು ಸಲಹೆಗಾರ ಉಮೇಶ್, ಎಇಇ ಸತ್ಯನಾರಾಯಣ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ, ಲೋಕೋಪಯೋಗಿ ಇಲಾಖೆ ಎಇಇ ಸಿ.ಚಂದ್ರಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನವೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net