

ಹನೂರು: ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ರಸ್ತೆ ವಿಸ್ತರಣೆ ಜತೆಗೆ ಪಾರ್ಕಿಂಗ್ ನಿರ್ಮಿಸಲು ಸ್ಥಳ ನೀಡುವಂತೆ ಶಾಸಕ ಎಂ.ಆರ್.ಮಂಜುನಾಥ್ ವಾಣಿಜ್ಯ ಕಟ್ಟಡಗಳ ಮಾಲೀಕರಲ್ಲಿ ಮನವಿ ಮಾಡಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪಟ್ಟಣದ ರಸ್ತೆ ಬದಿಯಲ್ಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ಹಾಗೂ ಬಾಡಿಗೆದಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನೂರು ತಾಲೂಕು ಕೇಂದ್ರ. ಈ ಮಾರ್ಗದ ಮೂಲಕ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆದರೆ ಮಹಾಶಿವರಾತ್ರಿ, ಯುಗಾದಿ, ದೀಪಾವಳಿ ಹಾಗೂ ಅಮಾವಾಸ್ಯೆ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಇದರಿಂದ ಸಾರ್ವಜನಿಕರು ತುಂಬ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈಗಾಗಲೇ ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೊಳ್ಳೇಗಾಲದಿಂದ ಹನೂರಿನವರೆಗೆ ಬಹುತೇಕ ಮುಕ್ತಾಯಗೊಂಡಿದೆ. ಆದರೆ ಪಟ್ಟಣದಲ್ಲಿ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ರಸ್ತೆ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿನ ಬಹುತೇಕ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೆಲವು ಕಟ್ಟಡಗಳು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಗ್ಗೆ ಅಗತ್ಯ ದಾಖಲೆ ಸಲ್ಲಿಸಿ ರಸ್ತೆ ವಿಸ್ತರಣೆ ಹಾಗೂ ಪಾರ್ಕಿಂಗ್‌ಗೆ ಸ್ಥಳ ನೀಡಿ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಗುಪ್ತ ಮಾತನಾಡಿ, ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಅಗತ್ಯ ಸ್ಥಳ ನೀಡಲಾಗಿದೆ. ಪಾರ್ಕಿಂಗ್‌ಗೆ ಸ್ಥಳ ನೀಡುವಂತೆ ಶಾಸಕರು ಮನವಿ ಮಾಡಿದ್ದು, ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಒಮ್ಮತದ ಅಭಿಪ್ರಾಯದಿಂದ ತಿಳಿಸಿದರು.
ಇದೇ ವೇಳೆ ಶಾಸಕರು ಮಾತನಾಡಿ, ಪಟ್ಟಣದಲ್ಲಿ ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸದ ಕಾರಣ ಕೆಲವರಿಗೆ ಸರ್ಕಾರದಿಂದ ಪರಿಹಾರದ ಹಣ ದೊರಕದಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಸಂಬಂಧಪಟ್ಟವರು ಅಗತ್ಯ ದಾಖಲೆಗಳನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ನೀಡಬೇಕು. ಮುಂದಿನ ದಿನಗಳಲ್ಲಿ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಶ್ರೀನಿವಾಸನಾಯ್ಡು, ಸುರೇಶ್, ರಾಜುನಾಯ್ಡು, ಗೋಪಾಲ್ ನಾಯ್ಡು, ಕನಕರಾಜು ಗುಪ್ತ, ರಾಜುನಾಯ್ಡು, ಆನಂದ್, ಪ್ರಭು, ಗೋವಿಲ್,ಬಾಬು, ಮನ್ಸೂರ್, ರಾಧಾಕೃಷ್ಣಗುಪ್ತ, ದೇವರಾಜು ಇತರರು ಇದ್ದರು.