

ತುಮಕೂರು: ಮಠ ಮಾನ್ಯಗಳ ಸ್ಥಾಪನೆಯಿಂದ ಸಣ್ಣಪುಟ್ಟ ಸಮುದಾಯಗಳ ಜನರೂ ಅಕ್ಷರ ಕಲಿಯಲು ಸಾಧ್ಯವಾಯಿತು. ಕಾಯಕವನ್ನೇ ನಂಬಿರುವ ನೇಕಾರ ಸಮುದಾಯವೂ ಈ ದಿಕ್ಕಿನತ್ತ ಪ್ರಬಲವಾದ ಹೆಜ್ಜೆ ಇಡಬೇಕಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯ ಅವರ 1043ನೇ ಜಯಂತಿಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ 2015ರಲ್ಲಿ ನೇಕಾರರ ಸಮುದಾಯದ ಮಹತ್ವ ಅರಿತು, ವಿಶ್ವ ನೇಕಾರರ ದಿನ ಘೋಷಣೆ ಮಾಡಿ, ನೇಕಾರ ಸಮುದಾಯದ ತಮ್ಮ ಕಸುಬನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ ಎಲ್ಲ ನೆರವು ನೀಡಿದ್ದರು ಎಂದು ಸ್ಮರಿಸಿದರು.
ದೊಡ್ಡಬಳ್ಳಾಪುರದ ಶ್ರೀದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ನೇಕಾರರ ಸಮುದಾಯದ ಎಲ್ಲ ಪಂಗಡಗಳಿಗೂ ಒಂದು ಸುದಿನ. ಎಲ್ಲ ನೇಕಾರರು ಒಂದು ಗೂಡಿ, ನಾವು ಸಮಾಜದಲ್ಲಿ ಹೇಗೆ ನಡೆಯಬೇಕು ಎಂದು ತೋರಿಸಿಕೊಟ್ಟ ಅದ್ಯ ವಚನಕಾರ ದೇವರದಾಸಿಮಯ್ಯ ಅವರ ಜಯಂತಿ ಸಂಘಟನೆಗೆ ಪೂರಕ ಎಂದರು.
ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠದ ಶ್ರೀಪ್ರಭುಲಿಂಗಸ್ವಾಮೀಜಿ ಮಾತನಾಡಿ, ಸಮುದಾಯದ ಗುರು ದೇವರದಾಸಿಮಯ್ಯ ಅವರ 1043ನೇ ಜಯಂತಿ ನೆಪದಲ್ಲಿ ಎಲ್ಲ ನೇಕಾರ ಸಮುದಾಯಗಳು ಒಗ್ಗೂಡಲು ಸಾಧ್ಯವಾಗಿದೆ. ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಸಮುದಾಯದ ಬೆಳವಣಿಗೆ ಮತ್ತಷ್ಟು ಪೂರಕವಾಗಲಿ ಎಂದರು.
ಕುರುಹಿನಶೆಟ್ಟಿ ಸಮಾಜದ ಶ್ರೀ1008 ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧನಿಯಕುಮಾರ್ ಮಾತನಾಡಿದರು.ದೇವರ ದಾಸಿಮಯ್ಯ ಅವರ ಕುರಿತು ನಿವೃತ್ತ ಆರೋಗ್ಯಾಧಿಕಾರಿ ಜಿ.ಕೆ.ಕುಲಕರ್ಣೀ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್,ಕಾರ್ಯಾಧ್ಯಕ್ಷ ಅಂಬಾದಾಸ್ ಕಾಮೂರ್ತಿ, ಜಿಲ್ಲಾಧ್ಯಕ್ಷ ಗಂಗಪ್ಪ, ಜಿಲ್ಲಾ ದೇವಾಂಗ ಸಮುದಾಯದ ಅಧ್ಯಕ್ಷ ರಾಮಕೃಷ್ಣಯ್ಯ, ಕುರುಹಿನಶೆಟ್ಟಿ ಸಮುದಾಯದ ಟಿ.ಎಚ್.ಯೋಗಾನಂದ, ಪದ್ಮಶಾಲಿ ಸಮುದಾಯದ ಜಿ.ಜಗದೀಶ್, ತೋಗಟವೀರ ಸಮುದಾಯದ ಕರಿಯಪ್ಪ ಇದ್ದರು.
ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ: ವಚನಕಾರ ಶ್ರೀದೇವರ ದಾಸಿಮಯ್ಯ ಅವರ 1043ನೇ ಜಯಂತಿ ಅಂಗವಾಗಿ ಮಂಗಳವಾರ ದೇವರದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಗರದ ಬಿಜಿಎಸ್ ವೃತ್ತದಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಆರಂಭವಾದ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಚಾಲನೆ ನೀಡಿದರು. ಮೆರವಣಿಗೆ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಗುಂಚಿ ಸರ್ಕಲ್ ಮೂಲಕ ಡಾ.ಗುಬ್ಬಿ ವೀರಣ್ಣ ರಂಗಮಂದಿರ ತಲುಪಿತು. ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರದ ಶ್ರೀದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಹುಬ್ಬಳ್ಳಿಯ ಕುರಹೀನಶೆಟ್ಟಿ ಮಠದ ಶ್ರೀ1008 ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಶ್ರೀಪ್ರಭುಲಿಂಗ ಸ್ವಾಮೀಜಿ, ಪಾಲಿಕೆ ಸದಸ್ಯೆ ಗಿರಿಜಾ, ಟಿ.ಆರ್.ಆಂಜಿನಪ್ಪ, ಚಂದ್ರಶೇಖರಗೌಡ ಮತ್ತಿತರರು ಇದ್ದರು.
ಹಿಂದುಳಿದ ವರ್ಗಗಳಲ್ಲಿ ಒಂದಾದ ನೇಕಾರರ ಸಮುದಾಯ ರಾಜಕೀಯ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಮುಂದೆ ಬರಬೇಕು. ಈ ಸಮುದಾಯದ ಏಳ್ಗೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ನೇಕಾರ ಸಮಾಜದ ಎಲ್ಲ ಪಂಗಡಗಳಿಗೂ ದಾಸಿಮಯ್ಯ ಅವರು ಗುರುಗಳಾಗಿದ್ದು, ನೇಕರಾರೆಲ್ಲರೂ ಒಂದುಗೂಡಿ ದೇವರ ದಾಸಿಮಯ್ಯ ಜಯಂತಿ ಆಚರಿಸುವ ಮೂಲಕ ಸಂಘಟಿತರಾಗಬೇಕು. ಆರ್.ರಾಜೇಂದ್ರ ವಿಧಾನ ಪರಿಷತ್ ಸದಸ್ಯ