ರಸ್ತೆ ವಿಭಜಕದ ಮೇಲೆ 6 ಸಾವಿರ ಸಸಿಗಳ ನಾಟಿ

6
Published on

ಆನೇಕಲ್: ಚಂದಾಪುರ ಪುರಸಭೆ ವ್ಯಾಪ್ತಿಯ ರಸ್ತೆ ವಿಭಜಕದ ಮಧ್ಯದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಿಎಸ್‌ಆರ್ ವಿಭಾಗ ಮತ್ತು ವೃಕ್ಷಮಿತ್ರ ಫೌಂಡೇಷನ್ ಸಹಯೋಗದಲ್ಲಿ 6 ಸಾವಿರ ಸಸಿಗಳನ್ನು ನೆಡುವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ವೃಕ್ಷಮಿತ್ರ ಫೌಂಡೇಷನ್ ಜಗದೀಶ್ ಮಾತನಾಡಿ, ಆನೇಕಲ್-ಚಂದಾಪುರ ಡಿವೈಡರ್ ಮೇಲೆ ಹೆಚ್ಚು ಕಸ ಸುರಿಯಲಾಗುತ್ತಿತ್ತು. ಕಸದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಿಎಸ್‌ಆರ್ ವಿಭಾಗ ಮತ್ತು ವೃಕ್ಷಮಿತ್ರ ಫೌಂಡೇಷನ್ ಸಹಯೋಗದಲ್ಲಿ ಚಂದಾಪುರ-ಇಗ್ಗಲೂರು ದ್ವಿಪಥ ರಸ್ತೆಯ ವಿಭಜಕದ ಮೇಲೆ ಒಟ್ಟು ಆರು ಸಾವಿರ ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ. ಸಂಘ-ಸಂಸ್ಥೆಗಳಲ್ಲದೇ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಅಲಯನ್ಸ್ ವಿವಿ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಮಾತನಾಡಿ, ಅಲಯನ್ಸ್ ವಿಶ್ವವಿದ್ಯಾಲಯದ ಸಿಎಸ್‌ಆರ್ ವಿಭಾಗದಿಂದ ಆರೋಗ್ಯ, ಶಿಕ್ಷಣ ಮತ್ತು ಪರಿಸರ ಕ್ಷೇತ್ರಗಳಿಗೆ ಕೊಡುಗೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಆನೇಕಲ್ ತಾಲೂಕಿನ 22 ಮಂದಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕಾಡಂಚಿನ ಗ್ರಾಮ ಹಕ್ಕಿಪಿಕ್ಕಿ ಕಾಲನಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಪರಿಸರ ಕ್ಷೇತ್ರಕ್ಕೆ ಆದ್ಯತೆ ನೀಡಲು ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ಪುರಸಭೆ ಅಧ್ಯಕ್ಷೆ ಶಾರದಾ ವರದರಾಜು, ಮುಖಂಡರಾದ ಬಿ.ಬಿ.ಐ.ಮುನಿರೆಡ್ಡಿ, ಗೋಪಾಲರೆಡ್ಡಿ, ಮುನಿತಿಮ್ಮಾರೆಡ್ಡಿ, ಅಲಯನ್ಸ್ ವಿವಿ ರಿಜಿಸ್ಟರ್ ಮಠಂ ವಿಶ್ವನಾಥಯ್ಯ, ಜಯರಾಮ್, ಶ್ರೀದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net