

ಹೊಳೆಆಲೂರ: ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ಮಳೆಯಿಂದಾಗಿ ಕೆಸರುಗದ್ದೆಯಂತಾದ ರಸ್ತೆ, ದುರ್ನಾತ ಬೀರುವ ಚರಂಡಿಗಳಿಂದ ಹೊಳೆಆಲೂರ ಗ್ರಾಮದ ಜನರು ರೋಸಿ ಹೋಗಿದ್ದಾರೆ.
ಗ್ರಾಮದ ಗಾಂಧಿ ನಗರ, ದುರ್ಗಾ ಕಾಲನಿ ಹಾಗೂ ಅರಳಿ ಮರದ ಓಣಿಯ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ, ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ದಿನದೂಡುವಂತಾಗಿದೆ.
ಇತ್ತೀಚೆಗೆ ನಿರ್ವಿುಸಿದ ಗಟಾರು ಕಳಪೆ ಹಾಗೂ ಅರ್ಧಮರ್ದ ಕಾಮಗಾರಿಯಿಂದಾಗಿ ಕಾಲನಿಯಿಂದ ಮುಂದೆ ಹರಿದು ಹೋಗಬೇಕಾದ ಗಟಾರು ನೀರು ಯಚ್ಚರೇಶ್ವರ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ದೇವಸ್ಥಾನಕ್ಕೆ ಹೋಗುವವರು ಕೊಳಚೆ ನೀರಿನಲ್ಲೇ ನಡೆದು ಹೋಗಬೇಕಾಗಿದೆ. ದುರ್ಗಾ ಕಾಲನಿಯ ಹಲವಾರು ಮನೆಗಳಿಗೂ ನೀರು ನುಗ್ಗುವುದರಿಂದ ಮನೆಗಳು ಶಿಥಿಲವಾಗತೊಡಗಿವೆ.
ಶೌಚಕ್ಕೆ ಹೋಗಲು ಸಂಕಟ: ಗ್ರಾ.ಪಂ.ನವರು ಗ್ರಾಮದ ಎಲ್ಲ ಕಸವನ್ನು ತಂದು ಮಹಿಳಾ ಶೌಚಗೃಹದ ಹತ್ತಿರ ತಂದು ಹಾಕುತ್ತಿರುವುದರಿಂದ ಗಾಂಧಿ ನಗರ, ದುರ್ಗಾ ಕಾಲನಿ, ಅರಳಿಮರದ ಓಣಿಯ ಮಹಿಳೆಯರು ಶೌಚಕ್ಕೆ ಹೋಗಲು ತೊಂದರೆ ಅನುಭವಿಸಬೇಕಾಗಿದೆ. ಅಲ್ಲದೆ, ಶೌಚಗೃಹದ ಪಕ್ಕದಲ್ಲೇ ಚರಂಡಿ ನೀರು ರಸ್ತೆ ಮೆಲೆ ಹರಿಯುತ್ತಿರುವುದರಿಂದ ಹಂದಿಗಳ ಹಾವಳಿ ಹೆಚ್ಚಾಗಿದೆ. ಕೆಸರಿನಲ್ಲೇ ಸಂಚರಿಸುವಾಗ ಹಲವಾರು ಜನರು ಬಿದ್ದು ಗಾಯಗೊಂಡಿದ್ದಾರೆ. ಕನಿಷ್ಠ ನಾಲ್ಕಾರು ಗಾಡಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಸಿ ಎಂದು ಸ್ಥಳೀಯರು ಒತ್ತಾಯಿಸಿದರೂ ಸಂಬಂಧಪಟ್ಟ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಮಹಿಳಾ ಶೌಚಗೃಹದ ಎತ್ತರ ಹೆಚ್ಚಿಸುವಂತೆ ಕೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ.
ಪ್ರತಿಭಟನೆಯ ಎಚ್ಚರಿಕೆ: ಕೋಟೆಯವರ ಮಿಲ್ನಿಂದ ದುರ್ಗಾ ದೇವಸ್ಥಾನದವರೆಗೆ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ರಸ್ತೆಯ ಎರಡೂ ಬದಿಗೆ ಗಟಾರು ನಿರ್ವಿುಸಬೇಕು. ಹದಗೆಟ್ಟಿರುವ ಮಹಿಳಾ ಶೌಚಗೃಹದ ಹಾದಿ ಸುಗಮಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ನಿವಾಸಿಗಳಾದ ಲಕ್ಷ್ಮೀಭಾಯಿ ಹೆಗ್ರಿ, ಶಾಂತಾ ಕಾತರಕಿ, ಲಕ್ಷ್ಮೀಭಾಯಿ ದಾಮೋಧರ, ಶಾಂತಾ ಅವರಾದಿ, ಸರೋಜವ್ವ ಗೌಡಪ್ಪನ್ನವರ, ಗಿರಿಜವ್ವ ಹೆಬ್ಬಳ್ಳಿ, ಚಂದವ್ವ ಪೂಜಾರ, ಶಿವವ್ವ ಹಾದಿಮನಿ, ಯಲ್ಲವ್ವ ಪೂಜಾರ, ಭಾರತಿ ಪಾಟೀಲ, ಮಾಯವ್ವ ಆಣಿ, ಬೀಬಿಜಾನ್ ನದಾಫ್, ದಾವಲ್ಬಿ ನದಾಫ್, ನೀಲವ್ವ ಜಡಮಳಿ, ಶಾಂತಾ ಮಡಿವಾಳರ ಆಗ್ರಹಿಸಿದ್ದಾರೆ.
ಗಟಾರ್ ನೀರು ಸರಿಯಾಗಿ ಮುಂದೆ ಹೋಗಲಾರದೆ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಪದೇ ಪದೆ ಸಮಸ್ಯೆಯಾಗುತ್ತಿದೆ. ಕಳೆದ ಸಭೆಯಲ್ಲಿ ಅಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸುವ್ಯವಸ್ಥಿತ ಗಟಾರು ನಿರ್ವಿುಸಲು ಗ್ರಾಮ ವಿಕಾಸ ಯೋಜನೆಯಡಿ ಅನುಮೋದನೆ ಪಡೆಯಲಾಗಿದೆ. ಶೀಘ್ರವೇ ಕೆಲಸ ಆರಂಭಿಸುತ್ತೇವೆ. ಶೌಚಗೃಹಕ್ಕೆ ಹೋಗುವ ದಾರಿ, ಅದರ ಎತ್ತರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಸರಿಪಡಿಸುತ್ತೇವೆ.| ಮಂಜುನಾಥ ಗಣಿ, ಗ್ರಾಪಂ ಪಿಡಿಒ, ಹೊಳೆಆಲೂರ