ರಸ್ತೆ ಮಧ್ಯದಲ್ಲಿ ಸಿಲುಕಿದ ಬಸ್, ಟ್ರ್ಯಾಕ್ಟರ್

7Naregal1
Published on

ನರೇಗಲ್ಲ: ಪಟ್ಟಣದಿಂದ ತೊಂಡಿಹಾಳ ಮಾರ್ಗವಾಗಿ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಬುಧವಾರ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ಸಿಲುಕಿದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಯಿತು.

ರೋಣದಿಂದ ನರೇಗಲ್ಲ ಮೂಲಕ ಕೊಪ್ಪಳಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ ಯಲಬುರ್ಗಾ ತಾಲೂಕು ಕುಕನೂರನಿಂದ ನರೇಗಲ್ಲ ಕಡೆಗೆ ಬರುತ್ತಿದ್ದ ಇಟ್ಟಂಗಿ ತುಂಬಿದ ಟ್ರ್ಯಾಕ್ಟರ್ ದ್ಯಾಂಪೂರ ಗ್ರಾಮದ ಹತ್ತಿರ ಸಿಲುಕಿಕೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಯಿತು.

ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾ.ಪಂ. ವತಿಯಿಂದ ನರೇಗಲ್ಲ-ತೊಂಡಿಹಾಳ ರಸ್ತೆಯಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಕೊಳವೆ ಬಾಯಿಯ ನೀರು ಪೂರೈಕೆ ಮಾಡುವ ಪೈಪ್​ಲೈನ್ ದುರಸ್ತಿಗಾಗಿ ತೊಂಡಿಹಾಳ ಗ್ರಾ.ಪಂ. ರಸ್ತೆ ಅಗೆದು ಪೈಪ್​ಲೈನ್ ದುರಸ್ತಿ ಮಾಡಿದ್ದಾರೆ. ಆದರೆ, ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದ ಕಾರಣ ಬಸ್ ಹಾಗೂ ಟ್ರಾ್ಯಕ್ಟರ್ ಸಿಲುಕಲು ಕಾರಣವಾಗಿದೆ.

ವಾಗ್ವಾದ: ತೊಂಡಿಹಾಳ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಬಸ್, ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದ್ದು, ಗ್ರಾ.ಪಂ. ಸಿಬ್ಬಂದಿಯೇ ರಸ್ತೆ ಹಾಳು ಮಾಡಿದ್ದಾರೆ ಎಂದು ನರೇಗಲ್ಲನ ಸಾರ್ವಜನಿಕರು ಆರೋಪಿಸಿದರು. ಇದರಿಂದ ಕೇರಳಿದ ತೊಂಡಿಹಾಳ ಗ್ರಾಮಸ್ಥರು, ನಮ್ಮ ವ್ಯಾಪ್ತಿಯ ರಸ್ತೆಗಳು ಉತ್ತಮವಾಗಿವೆ. ನಿಮ್ಮ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದು, ನಿಮ್ಮ ಶಾಸಕರು ಜೀವಂತವಾಗಿದ್ದಾರೆಯೇ? ಅವರಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿಕೊಳ್ಳಲಾಗುತ್ತಿಲ್ಲ ನಿಮಗೆ ಎಂದರು. ಇದರಿಂದಾಗಿ ಸ್ವಲ್ಪ ಸಮಯ ಗೊಂದಲದ ವಾತಾವರಣ ನಿರ್ವಣವಾಗಿ, ಪರಸ್ಪರ ಮಾತಿನ ಚಕಮಕಿ ನಡೆಯಿತು.

ನರೇಗಲ್ಲ ಪ.ಪಂ. ಸಿಬ್ಬಂದಿ ಸ್ಥಳಕ್ಕಾಗಮಿಸಿ ಜೆಸಿಬಿ ಸಹಾಯದಿಂದ ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿರುವ ವಾಹನಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವುಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net