

ಕಡೂರು: ಜನಸಂಖ್ಯೆಗೆ ಅನುಗುಣವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಸ್ವಚ್ಛತೆಯೇ ದೊಡ್ಡ ಸವಾಲಾಗಿದ್ದು, ಪ್ರಮುಖ ರಸ್ತೆಗಳ ಬದಿಯಲ್ಲಿ ತಲೆ ಎತ್ತಿರುವ ಗೂಡಂಗಡಿ, ಪಾನಿಪುರಿ, ಟೀ ಸ್ಟಾಲ್‌ಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪಟ್ಟಣದ ನ್ಯಾಯಾಲಯದ ಮುಂಭಾಗದಲ್ಲಿರುವ ರಸ್ತೆ, ಬಸ್ ನಿಲ್ದಾಣದಿಂದ ಪುರಸಭೆಗೆ ತೆರಳುವ ರಸ್ತೆ, ಕದಂಬ ವೃತ್ತ, ಗಣಪತಿ ಪೆಂಡಾಲ್ ಮುಂದೆ ಗೂಡಂಗಡಿಗಳು, ಪಾನಿಪುರಿ, ಟೀ ಸ್ಟಾಲ್‌ಗಳನ್ನು ರಸ್ತೆಯಲ್ಲಿರಿಸಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಹಾಗೂ ಸ್ವಚ್ಛತೆಗೆ ತೊಂದರೆಯಾಗುತ್ತಿರುವ ದೂರುಗಳು ಬಂದಿವೆ ಎಂದರು. ಇದಕ್ಕೆ ಸದಸ್ಯರು ಸಹಮತವ್ಯಕ್ತಪಡಿಸಿ, ಸ್ವಚ್ಛತೆ ಕಾಪಾಡುವ ಹಿತದೃಷ್ಟಿಯಿಂದ ಕೂಡಲೆ ಆಯ್ದ ಭಾಗಗಳಲ್ಲಿ ತೊಂದರೆಯಾಗುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪುರಸಭೆ ಆಡಳಿತ ಕೈಜೋಡಿಸಬೇಕೆಂದು ಕಡೂರು ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಎಸ್ಪಿ ಸಹ ಮುಕ್ತ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಲು ಸೂಚಿಸಿರುವುದರಿಂದ ಗೂಡಂಗಡಿಗಳ ತೆರವು ಶೀಘ್ರವೇ ನಡೆಯಲಿದೆ ಎಂದರು.
ಪಟ್ಟಣದ ಕಲ್ಲೇಶ್ವರ ಟಿವಿ ಸೆಂಟರ್ ಮುಂಭಾಗದ ರಸ್ತೆಯಲ್ಲಿ ಹೂವಿನ ವ್ಯಾಪಾರಿಗಳು ಬೆಳಗ್ಗೆ ಮತ್ತು ಸಂಜೆ ವೇಳೆ ವ್ಯಾಪಾರದಲ್ಲಿ ತೊಡಗಿಕೊಳ್ಳುವುದರಿಂದ ವಾಹನಗಳ ದಟ್ಟಣೆಯಿಂದ ಅತಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ದ್ವಿಚಕ್ರವಾಹನಗಳೂ ಸಂಚರಿಸಲು ಆಗದೆ ಪದೇಪದೆ ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿರುವ ಜಾಗದಲ್ಲಿ ಹೂವಿನ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ರೈತರು ಮತ್ತು ಹೂವಿನ ವ್ಯಾಪಾರಿಗಳು ಇಂದಿರಾ ಕ್ಯಾಂಟಿನ್ ಮುಂಭಾಗದಲ್ಲಿ ನಿತ್ಯ ವ್ಯಾಪಾರ ಮಾಡಿಕೊಳ್ಳಬಹುದು. ಹೂವಿನ ವ್ಯಾಪಾರಿಗಳು ಸಹಕರಿಸಬೇಕು ಎಂದರು.
ಹಾಲಮ್ಮ ಸಿದ್ರಾಮಪ್ಪ ಮಾತನಾಡಿ, ವೀರಭದ್ರೇಶ್ವರ ದೇವಾಲಯದಿಂದ ಸಿದ್ದನಾಯ್ಕಣ್ಣ ಅವರ ಮನೆಯವರೆವಿನ ರಸ್ತೆಗೆ ಮಣ್ಣನ್ನಾದರೂ ಹಾಕಿಸಿ ಎಂದು ಮನವಿ ಮಾಡಿದರು. ಪುರಸಭೆಗೆ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು, ಸದಸ್ಯರು ವಾರ್ಡ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಗೆ ಹಾಗೂ ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತು ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಪ್ರೇವಜ್ಯೋತಿ ಶಾಲೆ ಪಕ್ಕದಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ರಾಜಕಾಲುವೆ ಮುಚ್ಚಿ ನೀರುಹರಿಯದಂತೆ ಮಾಡಿದ್ದಾರೆ. ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸುಧಾ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌ಮೂರ್ತಿ ಪ್ರತಿಕ್ರಿಯಿಸಿ, ಯಾವುದೇ ರಾಜಕಾಲುವೆಗೆ ಚರಂಡಿ ನೀರು ಹರಿಸುವಂತಿಲ್ಲ. ಅದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು. ಭಂಡಾರಿ ಶ್ರೀನಿವಾಸ್ ಮಾತನಾಡಿ, ಹೊಸ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಹರಿಯಲು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದರು.
ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸೋಮಣ್ಣ, ಮರುಗುದ್ದಿ ಮನು, ಈರಳ್ಳಿ ರಮೇಶ್, ಯತೀರಾಜ್, ವಿಜಯಾ ಚಿನ್ನರಾಜ್, ಗೋವಿಂದರಾಜ್, ಲತಾ, ಜ್ಯೋತಿ, ಹಾಲಮ್ಮ, ಪದ್ಮಾ, ಸುಧಾ, ವಿಜಯಲಕ್ಷ್ಮೀ, ಪುಷ್ಪಾಲತಾ, ಕಮಲಾ, ಶ್ರೀಕಾಂತ್, ಇಕ್ಬಾಲ್, ಯಾಸೀನ್, ಮೋಹನ್‌ಕುಮಾರ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಇಂಜಿನಿಯರ್ ಶ್ರೇಯಸ್, ತಿಮ್ಮಯ್ಯ ಇದ್ದರು.