

ಕುದೂರು ಪಟ್ಟಣದ ಬೈಪಾಸ್ ರಸ್ತೆ, ನವಗ್ರಾಮ ಬಳಿಯ ರಸ್ತೆಬದಿ ಹಾಗೂ ಮರೂರು ಮುಖ್ಯ ರಸ್ತೆಯ ಇಕ್ಕೆಲದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಇದೇ ರಸ್ತೆ ಮೂಲಕ ತುಮಕೂರು, ಸೋಲೂರಿಗೆ ನೂರಾರು ಸಾರ್ವಜನಿಕರು ತೆರಳುತ್ತಾರೆ. ಆದರೆ, ರಸ್ತೆ ಬದಿ ಬಿದ್ದಿರುವ ಕಸ ದಾರಿಹೋಕರಿಗೆ ಅಸಹ್ಯ ಮೂಡಿಸುತ್ತಿದೆ.
ಪ್ಲಾಸ್ಟಿಕ್ ಕಸ, ಕೊಳೆತ ತರಕಾರಿ, ಎಳನೀರು ಚಿಪ್ಪನ್ನು ತಂದು ರಸ್ತೆ ಪಕ್ಕ ಸುರಿಯಲಾಗುತ್ತದೆ. ಕೊಳೆತ ತರಕಾರಿ, ಹಣ್ಣು ತಿನ್ನುವ ಭರದಲ್ಲಿ ಜಾನುವಾರುಗಳು ಪ್ಲಾಸ್ಟಿಕ್ ಸೇವಿಸಿ ರೋಗಕ್ಕೆ ತುತ್ತಾಗುವ ಸನ್ನಿವೇಶ ಸೃಷ್ಟಿಯಾಗಿದೆ.
ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಕಸ ತಂದು ಎಸೆಯುವವರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷ ಕಾರ್ಯಕ್ರಮ ನಡೆದಾಗ ಕೆಲವರು, ಊಟದ ತ್ಯಾಜ್ಯ, ಅಡಕೆ ಹಾಳೆತಟ್ಟೆಯನ್ನೂ ರಸ್ತೆ ಬದಿ ಎಸೆಯುವುದನ್ನು ರೂಢಿಸಿಕೊಂಡಿದ್ದಾರೆ. ಜತೆಗೆ ಕೋಳಿ ತ್ಯಾಜ್ಯವನ್ನು ವಿಲೇ ಮಾಡುತ್ತಿರುವುದರಿಂದ ಇಡೀ ಪರಿಸರ ಗಬ್ಬು ನಾರುತ್ತಿದೆ.
ಬೈಪಾಸ್ ರಸ್ತೆ ಹಾಗೂ ಮರೂರು ರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್ ಕಸ ಮತ್ತು ಕೊಳೆತ ತರಕಾರಿ, ಹಣ್ಣುಗಳು ಇನ್ನಿತರ ವಸ್ತುಗಳಿಂದ ದುರ್ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ರೀತಿ ಮಾಡುವವರಿಗೆ ಪಂಚಾಯಿತಿ ದಂಡ ವಿಧಿಸಬೇಕು ಎನ್ನುತ್ತಾರೆ ಸ್ಥಳೀಯ ನಾಗರಾಜು.
ಕಸ ಬೀಳುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ. ಪಟ್ಟಣದ ನಾಗರಿಕರು ಸ್ವಚ್ಛತೆ, ಪರಿಸರದ ಉಳಿವಿಗಾಗಿ ಕೈಜೋಡಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯತಿರಾಜು ಆಗ್ರಹಿಸಿದ್ದಾರೆ.
ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂಬ ನಾಮಫಲಕ ಹಾಕಿಸಿದ್ದರೂ ತ್ಯಾಜ್ಯದ ಸಮಸ್ಯೆ ಬಗೆಹರಿಯುತ್ತಿಲ್ಲ. ಎರಡು ದಿನ ಕಸದ ವಾಹನ ಬರದಿದ್ದರೆ ಬೈಪಾಸ್ ರಸ್ತೆಯ ಬಿರಿಯಾನಿ, ಕಬಾಬ್, ಮೀನು ಹೋಟೆಲ್ ನವರು ಮಾಂಸದ ತ್ಯಾಜ್ಯವನ್ನು ರಸ್ತೆ ಬದಿ, ಚರಂಡಿಯಲ್ಲಿ ಸುರಿದು ಹೋಗುತ್ತಾರೆ ಎಂದು ಬೈಪಾಸ್ ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ಪುರುಷೋತ್ತಮ್, ಪಂಚಾಯಿತಿ ಪಿಡಿಒಪಂಚಾಯಿತಿಯು ಕಸದ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮಸ್ಯೆಯ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪರಿಹಾರದ ಕುರಿತು ಕೈಗೊಳ್ಳಲಾಗುವುದು. ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.