

ಸಿದ್ದಾಪುರ: ಸಿದ್ದಾಪುರ ಪಾಲಿಬೆಟ್ಟ ರಸ್ತೆ ಬದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಸಿದ್ದಾಪುರದ ಬೆಟ್ಟದಕಾಡು ನಿವಾಸಿ ರೋಸಿ ಅವರ ಮಗ ಕ್ರಿಸ್ಟಲ್(26) ಮೃತ ಯುವಕ. ಶುಕ್ರವಾರ ರಸ್ತೆಯ ಬಳಿ ಬಿದ್ದಿದ್ದ ಮೃತದೇಹವನ್ನು ಕಂಡು ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್‌ಪಿ ರಾಮರಾಜನ್, ಡಿವೈಎಸ್ಪಿ ಜಗದೀಶ್, ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಿದ್ದಾಪುರ- ಪಾಲಿಬೆಟ್ಟ ರಸ್ತೆಯ ಬಾರ್‌ವೊಂದರಲ್ಲಿ ಗುರುವಾರ ರಾತ್ರಿ ಕ್ರಿಸ್ಟಲ್ ಹಾಗೂ ಕೆಲವರ ಜತೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಗಲಾಟೆ ಮಾಡಿದವರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೃತನ ತಾಯಿ ರೋಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಸಾವಿಗೆ ರಂಜು,ರವಿ ಎಂಬುವರು ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿಡಲಾಗಿದ್ದು, ಮರಣೋತ್ತರ ಪರೀಕ್ಷೆ ಒಳಪಡಿಸಿ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.