

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಮುಖ್ಯ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಶನಿವಾರ ತಡರಾತ್ರಿ ಕಳ್ಳತನವಾಗಿದ್ದು, 9 ಚಕ್ರವನ್ನು ಕದ್ದೊಯ್ಯಲಾಗಿದೆ.
ಗ್ರಾಮದ ಪಂಚಾಕ್ಷರಿ ಅವರ ಲಾರಿಯನ್ನು ಚಾಲಕ ಶಿವು ಶನಿವಾರ ರಾತ್ರಿ ಮಲೆಮಹದೇಶ್ವರ ಮುಖ್ಯರಸ್ತೆಯ ಪಂಕ್ಚರ್ ಅಂಗಡಿ ಬದಿಯಲ್ಲಿ ನಿಲ್ಲಿಸಿದ್ದರು. ತಡರಾತ್ರಿ ಲಾರಿ ಕಳ್ಳತನವಾಗಿದೆ. ಈ ಬಗ್ಗೆ ಪಂಚಾಕ್ಷರಿ ಅವರು ಲಾರಿ ಅಸೋಸಿಯೇಷನ್‌ಗೆ ತಿಳಿಸಿ ಹುಡುಕಾಟ ನಡೆಸುತ್ತಿರುವಾಗ ಲಾರಿಯು ಲೊಕ್ಕನಹಳ್ಳಿ ಗ್ರಾಮದ ಸಂಪಿಗೇಶ್ವರ ದೇಗುಲ ಸಮೀಪದ ಕೊಳ್ಳೇಗಾಲಕ್ಕೆ ತೆರಳುವ ರಸ್ತೆ ಬದಿಯಲ್ಲಿ ನಿಂತಿರುವುದು ಪರಿಚಯಸ್ಥರಿಂದ ತಿಳಿದುಬಂತು.
ಸುದ್ದಿ ತಿಳಿದು ಸ್ಥಳಕ್ಕೆ ಪಂಚಾಕ್ಷರಿ ತೆರಳಿದಾಗ ಡಿಸ್ಕ್ ಸಮೇತ 9 ಚಕ್ರಗಳು, 2 ಬ್ಯಾಟರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪಂಚಾಕ್ಷರಿ ಅವರು ಭಾನುವಾರ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.