

ಹನೂರು: ಪಟ್ಟಣದಿಂದ ಲೊಕ್ಕನಹಳ್ಳಿಗೆ ತೆರಳುವ ಮಾರ್ಗದ ಹುಬ್ಬೆಹುಣಸೆ ಡ್ಯಾಂ ಸಮೀಪದ ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಸಾರ್ವಜನಿಕರು ಪಟ್ಟಣದ ಉಪ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಹುಬ್ಬೆಹುಣಸೆ ಡ್ಯಾಂ ಸಮೀಪ ರಸ್ತೆಯ ಬದಿಯ ಅಲ್ಲಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಸುಮಾರು 20ಕ್ಕೂ ಹೆಚ್ಚು ಬೃಹತ್ ಮರಗಳು ಒಣಗಿದ್ದು, ಬೀಳುವ ಸ್ಥಿತಿಯಲ್ಲಿವೆ. ಮರದ ಕೊಂಬೆಗಳು ಗಾಳಿಯ ರಭಸಕ್ಕೆ ಕೆಳಕ್ಕೆ ಬೀಳುತ್ತಿವೆ. ಇದರಿಂದ ಈ ರಸ್ತೆಯಲ್ಲಿ ಜನರು ಜೀವ ಭೀತಿಯಿಂದ ಸಂಚರಿಸಬೇಕಾಗಿದೆ. ಅದರಲ್ಲೂ ಬೈಕ್ ಸವಾರರು ಒಣಗಿ ನಿಂತಿರುವ ಮರಗಳ ಬಳಿ ಜೀವಭಯದಿಂದ ಹೆಚ್ಚು ವೇಗವಾಗಿ ಚಲಿಸಬೇಕಿದೆ.
ಈ ರಸ್ತೆಯು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸಲಿದ್ದು, ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರೂ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.
ಡಿ.1ರಂದು ವಿಜಯವಾಣಿಯಲ್ಲಿ ಒಣ ಮರಗಳ ತೆರವು ವಿಳಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಆದರೂ ಕ್ರಮ ಕೈಗೊಳ್ಳದಿರುವುದರಿಂದ ಬೇಸತ್ತ ಸಾರ್ವಜನಿಕರು ಪಟ್ಟಣದ ಕಚೇರಿಗೆ ಆಗಮಿಸಿ ಮರಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಡಿಆರ್‌ಎಫ್‌ಒ ಸಾಲನ್ ಮಾತನಾಡಿ, ತೆರವುಗೊಳಿಸುವ ಮರಗಳನ್ನು ಗುರುತು ಮಾಡಲಾಗಿದ್ದು, ಟೆಂಡರ್ ನೀಡಲಾಗುತ್ತಿದೆ. ಒಂದು ವಾರದೊಳಗೆ ಮರಗಳನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೊಕ್ಕನಹಳ್ಳಿಯ ಜಗದೀಶ್, ಉದ್ದನೂರಿನ ಸಿದ್ದರಾಜು, ಮಲ್ಲಿಕಾರ್ಜುನ, ನಂಜುಂಡಸ್ವಾಮಿ, ರಾಜು, ವಿಜಯಕುಮಾರ್ ಇತರರಿದ್ದರು.