ರಸ್ತೆ ಬಂದ್ ಮಾಡಿ ಗ್ರಾಮಸ್ಥರಿಂದ ಪ್ರತಿಭಟನೆ

6 skpp 1
6 ಎಸ್‌ಕೆಪಿಪಿ 1 ಚೀರಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಸಕಲೇಶಪುರ: ತಾಲೂಕಿನ ಚೀರಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ಮುಖ್ಯ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಚೀರಿ ಹೊಳೆಗೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಿಸಿ ನೀರು ಕೊಂಡೊಯ್ಯಲಾಗುತ್ತಿದೆ. ಆದರೆ, ಇದೆ ಗ್ರಾಮಸ್ಥರಿಗೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಸ್ತಕ್ಷೇಪದಿಂದ ಸೇತುವೆ ಹಾಗೂ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗದಾಗಿದೆ. ಗ್ರಾಮದಲ್ಲಿ ಸುಮಾರು 80 ಕುಟುಂಬಗಳಿದ್ದು, 700ಕ್ಕೂ ಹೆಚ್ಚಿನ ಮತದಾರರಿದ್ದು, ಮೂಲಸೌಕರ್ಯ ಇಲ್ಲದಾಗಿದೆ. ಹೀಗಾಗಿ ಮಕ್ಕಳನ್ನು ದೂರದ ಸಂಬಂಧಿಕರು ಹಾಗೂ ವಸತಿ ನಿಲಯದಲ್ಲಿ ಶಿಕ್ಷಣ ಕೂಡಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಹತ್ತಾರು ಕುಟುಂಬಗಳು ಗ್ರಾಮವನ್ನೇ ತೊರೆದಿವೆ ಎಂದು ಅಸಮಾಧಾನ ಹೊರಹಾಕಿದರು.

ಎತ್ತಿನಹೊಳೆ ಮೂಲ ಸೌಕರ್ಯ ಯೋಜನೆಯಡಿ ತಾಲೂಕಿನ ವಿವಿಧೆಡೆ ಹಾಗೂ ಜಿಲ್ಲೆಯ ಹಲವು ತಾಲೂಕಿನಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಚೀರಿ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿರುವ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆ ಮುನ್ನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಮನವೊಲಿಸಲು ಮುಂದಾದ ತಾಪಂ ಇಒ ವೆಂಕಟೇಶ್ ಅವರಿಗೆ ದಿಗ್ಭಂದನ ವಿಧಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗ್ರಾಮದ ಮುಖಂಡರಾದ ರಾಜು, ಪುಟ್ಟಸ್ವಾಮಿ, ಪ್ರದೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net