

ರಾಮದುರ್ಗ: ತಾಲೂಕಿನ 1,900ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಆವರಣದಲ್ಲಿ ಮಳೆಯಾದ ತಕ್ಷಣ ಹಳ್ಳದ ನೀರು ಸಂಗ್ರಹವಾಗುತ್ತದೆ. ಕಾಲೇಜಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಶ್ರೀಮತಿ ಈರಮ್ಮ ಶಿವಲಿಂಗಪ್ಪ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಆವರಣದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, ಹಳ್ಳಕ್ಕೆ ತಡಗೋಡೆ ನಿರ್ಮಾಣ, 20 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಪ.ಪೂ ಮಹಾವಿದ್ಯಾಲಯದ ವರೆಗೆ ಸುಧಾರಣೆ, 20 ಲಕ್ಷ ರೂ. ವೆಚ್ಚದಲ್ಲಿ ಹಿರೇಮೂಲಂಗಿಯಲ್ಲಿ ರಸ್ತೆ ಸುಧಾರಣೆ, ಮಲ್ಲಾಪುರ ಗ್ರಾಮದಿಂದ ಅಜ್ಜನ ಮಠದವರೆಗೆ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ರಸ್ತೆ ಸುಧಾರಣೆ ಸೇರಿ ವಿದ್ಯಾ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದು, ಇನ್ನುಳಿದ ಕ್ಷೇತ್ರದ ಜನತೆಯ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಆನಂದ ಲಾಳಸಂಗಿ ಮಾತನಾಡಿ, ಶಾಸಕರು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ವಹಿಸಿ, ಅಗತ್ಯ ಕಟ್ಟಡ ಸೇರಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಡಿ.ಮುಜಾವರ ಪ್ರಾಸ್ತಾವಿಕ ಮಾತನಾಡಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಪ್ರಕಾಶ ಬರದೇಲಿ, ಪಿಆರ್‌ಇಡಿ ಎಇಇ ಎಂ.ಐ. ಕೋಳಿ, ಜೆ.ಇ. ವಿಜಯಪತ್ತಾರ, ಕಾಲೇಜಿನ ಸಿಡಿಸಿ ಕಮಿಟಿ ಪದಾಧಿಕಾರಿ ಸೋಮನಾಥ ಧೂತ್ ಇದ್ದರು.