

ನರೇಗಲ್ಲ: ಸಮೀಪದ ಡ.ಸ. ಹಡಗಲಿ-ಅಬ್ಬಿಗೇರಿ ರಸ್ತೆ ದುರಸ್ತಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿಲ್ಲ. ಅದರಿಂದ ಬೇಸತ್ತ ರೈತರು ಸ್ವಂತ ಹಣದಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಸಚಿವ ಸಿ.ಸಿ. ಪಾಟೀಲ ಅವರ ಮತಕ್ಷೇತ್ರವಾದ ಡ.ಸ. ಹಡಗಲಿ ಗ್ರಾಮದಿಂದ ಅಬ್ಬಿಗೇರಿ ಗ್ರಾಮ ಸಂರ್ಪಸುವ ರಸ್ತೆಯು 10 ಕಿ.ಮೀ. ಇದೆ. 5 ವರ್ಷಗಳ ಹಿಂದೆ ಅಬ್ಬಿಗೇರಿಯಿಂದ 5 ಕಿ.ಮೀ. ಮಾತ್ರ ಡಾಂಬರ್ ರಸ್ತೆ ನಿರ್ವಿುಸಲಾಗಿದೆ. ಇನ್ನುಳಿದ ರಸ್ತೆಗೆ ಗರಸು ಹಾಕಲಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಗರಸು ಕಿತ್ತು ಹೋಗಿ ರಸ್ತೆ ಸಂಪೂರ್ಣ ಹಾಳಾಗುತ್ತದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ವಣವಾಗುತ್ತವೆ. ಇದರಿಂದಾಗಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೊಬ್ಬರೂ ಗಮನ ಹರಿಸಿಲ್ಲ. ಆದ್ದರಿಂದ, ಈ ರಸ್ತೆಯಲ್ಲಿ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರಿಂದ ದೇಣಿಗೆ ಸಂಗ್ರಹಿಸಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಜೆಸಿಬಿ ಸಹಾಯದಿಂದ ರಸ್ತೆಯನ್ನು ದುರಸ್ತಿ ಮಾಡಲಾಗುತ್ತದೆ. ನಂತರ, ರಸ್ತೆಗೆ ಗರಸು, ಮರಳು ಹಾಕಲಾಗುತ್ತದೆ. ಡ.ಸ. ಹಡಗಲಿಯಿಂದ ತಾಲೂಕು ಕೇಂದ್ರ ರೋಣ, ಗಜೇಂದ್ರಗಡಕ್ಕೆ ಸಂರ್ಪಸುವ ಅತ್ಯಂತ ಸಮೀಪದ ರಸ್ತೆ ಇದಾಗಿದೆ. ಹತ್ತು ಹಲವು ಕೆಲಸ ಕಾರ್ಯಗಳಿಗೆ ನಿತ್ಯ ಇಲ್ಲಿನ ಜನರು ರೋಣ, ಗಜೇಂದ್ರಗಡಕ್ಕೆ ತೆರಳಲು ಪರದಾಡುತ್ತಿದ್ದು, ಸುತ್ತಿ ಬಳಸಿ ಸಮಯ ಹಾಗೂ ಹಣ ವ್ಯಯ ಮಾಡುತ್ತಿದ್ದಾರೆ. ದಶಕಗಳಿಂದ ಈ ರಸ್ತೆ ದುರಸ್ತಿಗೆ ಆಗ್ರಹಿಸಲಾಗುತ್ತಿದೆ. ಆದರೂ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಇನ್ನಾದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ, ಉಳಿದಿರುವ 5 ಕಿ.ಮೀ. ರಸ್ತೆಯನ್ನು ಡಾಂಬರ್ ರಸ್ತೆಯನ್ನಾಗಿಸಬೇಕು ಎಂದು ರೈತರಾದ ಯಲ್ಲಪ್ಪಗೌಡ ಹಿರೇಗೌಡ್ರ, ಸಂಗನಗೌಡ ಅಪ್ಪನಗೌಡ್ರ, ನಿಂಗನಗೌಡ ಆದಾಪೂರ, ಬಸವರಾಜ ಬಾರಕೇರ, ಅಶೋಕ ಕುರಿ, ವೀರಯ್ಯ ಶಿರಹಟ್ಟಿಮಠ, ವೀರಯ್ಯ ಸಾಲಿಮಠ ಆಗ್ರಹಿಸಿದ್ದಾರೆ.