

ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದಿಂದ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದವರೆಗಿನ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್. ಬಾಲರಾಜು ನೇತೃತ್ವದಲ್ಲಿ ತಾಲೂಕಿನ ಶಿವಕಳ್ಳಿ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಈ ರಸ್ತೆ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಇದರ ದುರಸ್ತಿಗೆ ಹಾಲಿ ಶಾಸಕ ಎನ್. ಮಹೇಶ್ ನಿರ್ಲಕ್ಷ್ಯ ವಹಿಸಿದ್ದಾರೆ. ಇವರು ಕ್ಷೇತ್ರಕ್ಕೆ ಹೊಸದಾಗಿ ಸಾಕಷ್ಟು ಪ್ರಮಾಣದಲ್ಲಿ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಇವರ ಕಾಲದಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ ತಂದಿದ್ದ ಕೆಲಸಗಳೇ ಆಗಿವೆ. ಈ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಇದು ಬಿಳಿಗಿರಿರಂಗನಬೆಟ್ಟಕ್ಕೂ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದ್ದು, ವಾಹನ ಸಂಚಾರ ಅಧಿಕವಾಗಿದೆ. ಈ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳನ್ನು ವಾಹನದಲ್ಲಿ ಸಾಗಿಸಲು ಕಷ್ಟಸಾಧ್ಯವಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಿಂದ ಕೂಡಲೇ ಇದರ ದುರಸ್ತಿಗೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮತ್ತಷ್ಟು ತೀವೃಗೊಳಿಸಲಾಗುವುದು ಎಂದರು.
ಮತ್ತೊಬ್ಬ ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ಕ್ಷೇತ್ರದ ಶಾಸಕರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದಂತೆ ಇವರೂ ಕೂಡ 40 ಪರ್ಸೆಂಟ್ ಶಾಸಕರಾಗಿ ಪರಿವರ್ತನೆಯಾಗಿದ್ದಾರೆ. ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿರುವ ಇವರಿಂದ ಕ್ಷೇತ್ರದ ಜನರು ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟವಾಗಿದೆ. ಇಷ್ಟು ವರ್ಷ ಸುಮ್ಮನಿದ್ದ ಇವರು ಈಗ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಆದರೆ ಜನರು ಇವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಈ ರಸ್ತೆ ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದರ ಅಭಿವೃದ್ಧಿ ಬಗ್ಗೆ ಇವರು ಕಾಳಜಿ ವಹಿಸಿಲ್ಲ. ಕ್ಷೇತ್ರದಲ್ಲಿ ಈಚೆಗೆ ರಸ್ತೆ, ಕೆರೆಗಳ ಅಭಿವೃದ್ಧಿಗೆ ಇವರು ಆದ್ಯತೆ ನೀಡಿಲ್ಲ. ಪ್ರವಾಹದಿಂದ ತತ್ತಿರಿಸಿರುವ ಗ್ರಾಮಗಳಿಗೆ ಇವರ ಕೊಡುಗೆ ಶೂನ್ಯವಾಗಿದೆ. ವಿಶೇಷ ಅನುದಾನ ತರುವಲ್ಲಿ ಇವರು ವಿಫಲವಾಗಿದ್ದಾರೆ. ಕೂಡಲೇ ಈ ರಸ್ತೆ ಅಭಿವೃದ್ಧಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೆದರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೌಡಹಳ್ಳಿ ಗ್ರಾಪಂ ಉಪಾಧ್ಯಕ್ಷ ರಘು, ಸದಸ್ಯರಾದ ಸುಂದರ್, ಉಮೇಶ್, ಮುಖಂಡರಾದ ಪ್ರಭುಸ್ವಾಮಿ, ಕಿನಕಹಳ್ಳಿ ಪ್ರಭುಪ್ರಸಾದ್, ಬೂದಿತಿಟ್ಟು ನಾಗೇಂದ್ರ, ಸತೀಶ್, ಆನಂದ್, ಪಂಜು, ಮಹದೇವಸ್ವಾಮಿ, ಚಂದ್ರು, ಹೊನ್ನೂರು ರಾಘವೇಂದ್ರ, ಗೌಡಹಳ್ಳಿ ರಾಜೇಶ್, ಮಾದೇಗೌಡ, ಹೊಸೂರು ಚಂದ್ರು, ಯೋಗೇಂದ್ರಗೌಡ ಹಾಜರಿದ್ದರು.