

ನೆಲಮಂಗಲ: ರಾ.ಹೆದ್ದಾರಿ 4ರಿಂದ ಆರ್‌ಟಿಒ ಕಚೇರಿ ಮಾರ್ಗವಾಗಿ ಕಿತ್ತನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿಗೆ ಆಗ್ರಹಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಉತ್ತರ ತಾಲೂಕು ನಾರಯಣಪಾಳ್ಯದ ಬಳಿ ಶುಕ್ರವಾರ ಸಾರ್ವಜನಿಕರು ಪ್ರತಿಭಟನೆ ನಡೆಸದರು.
ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಚುನಾವಣೆ ನಂತರ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಬೇಕು. ಆದರೆ ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿಗೆ ಮತನೀಡಿದ ಪ್ರದೇಶವನ್ನು ಮಾತ್ರ ಗುರುತಿಸಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ರಾ.ಹೆದ್ದಾರಿ.4ರಿಂದ ಆರ್‌ಟಿಒ ಕಚೇರಿ ಮಾರ್ಗವಾಗಿ ಕಿತ್ತನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದ್ದಗೆಟ್ಟಿದೆ. ರಸ್ತೆ ಅಭಿವೃದ್ಧಿಗೆ ಶಾಸಕರು ನಿರ್ಲಕ್ಷ್ಯವಹಿಸುವ ಮೂಲಕ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಗುತ್ತಿದಾರದಿಂದ ಕಮಿಷನ್: ರಸ್ತೆ ಅಭಿವೃದ್ಧಿಗೆಂದು ಸರ್ಕಾರ, 28 ಕೋಟಿ ಹಣ ಬಿಡುಗಡೆ ಮಾಡಿದ್ದು, ಈ ಹಣದಿಂದ ಬೃಹತ್ ರಸ್ತೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಹಾಗೂ ಬಿಡಿಎಯಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿ ಬೃಹತ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ ಕೃಷ್ಣಪ್ಪ, ಶಾಸಕರು ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ, ಹೆಚ್ಚು ಕಮಿಷನ್ ಆಸೆಯಿಂದ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿದ್ದಾರೆ ಎಂದು ದೂರಿದರು.
ಸಂಚಾರಕ್ಕೆ ಸಮಸ್ಯೆ: ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪಾಲ್ಯ ಬಳಿ ಸಮಾವೇಶಗೊಂಡ ಹತ್ತಾರು ಗ್ರಾಮದ ಗ್ರಾಮಸ್ಥರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾ.ಹೆದ್ದಾರಿ 4ರ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು 2 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಹಾಗೂ ನಗರ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.