ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

22MDG3
Published on

ಮುಂಡರಗಿ: ಬಿದರಹಳ್ಳಿ ಗ್ರಾಮದ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ತಾಲೂಕಿನ ಬಿದರಹಳ್ಳಿ ಗ್ರಾಮಸ್ಥರು ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ನಾಗರಾಜ ಮತ್ತೂರ ಮಾತನಾಡಿ, ಬಿದರಹಳ್ಳಿ ಗ್ರಾಮ ಮಾರ್ಗವಾಗಿ ವಿಠಲಾಪೂರ ಮತ್ತಿತರ ಗ್ರಾಮಗಳಿಗೆ ವಾಹನಗಳು ತೆರಳುತ್ತವೆ. ವಿವಿಧ ಗ್ರಾಮಗಳಲ್ಲಿ ಹಲವಾರು ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿಗೆ ದಿನನಿತ್ಯ ಭಾರಿ ಗಾತ್ರದ ವಾಹನಗಳ ಮೂಲಕ ವಿವಿಧ ಸಾಮಗ್ರಿ ಸಾಗಿಸಲಾಗುತ್ತಿದೆ. ಇದರಿಂದಾಗಿ ಬಿದರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ ಎಂದರು.

ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಬಿದರಹಳ್ಳಿ ಗ್ರಾಮವು ಮುಳುಗಡೆ ಗ್ರಾಮವಾಗಿರುವುದರಿಂದ ಅಲ್ಲಿ ರಸ್ತೆ ದುರಸ್ತಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ರಸ್ತೆಯು ದುರಸ್ತಿ ಕಾಣದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಿದರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಂ.ಎಸ್. ಕೊರ್ಲಹಳ್ಳಿ ಅವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ ಹದಗೆಟ್ಟಿರುವ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದರು.

ಗ್ರಾಮಸ್ಥರಾದ ಕುಮಾರಗೌಡ ಪಾಟೀಲ, ಗೋಣೆಪ್ಪ ಚವಡಾಳ, ಈರಣ್ಣ ಚೂರಿ, ಕೋಟೆಪ್ಪ ಕಿಲಾರಿ, ಮಂಜುನಾಥ ಭಜಂತ್ರಿ, ಸೂರ್ಯ ನಾರಾಯಣ, ಮಹೇಶ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net