

ಕಲಬುರಗಿ: ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಕುಸ್ಸೆಂಪ್ ಯೋಜನೆ ಅಡಿ ನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನ ಕೆಲಸ ತೀವ್ರಗೊಳಿಸಿ ಜನರಿಗೆ ಅನುವು ಮಾಡಿಕೊಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಸಂಬಂಧಿತರಿಗೆ ಸೂಚಿಸಿದರು.
ಪಾಲಿಕೆಯಲ್ಲಿ ಶುಕ್ರವಾರ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲಸ ತುಂಬ ಮಂದಗತಿಯಲ್ಲಿ ಸಾಗಿದೆ. ಪೈಪ್‌ಲೈನ್ ಅಳವಡಿಕೆ ಮತ್ತು ಈಗಾಗಲೇ ಹಾಕಿರುವ ಪೈಪ್‌ಗಳ ಹೈಡ್ರಾಲಿಕ್ ತಪಾಸಣೆಗೆ ಹೆಚ್ಚಿನ ತಂಡ ನಿಯೋಜಿಸಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿ ಹಾಳು ಮಾಡಿರುವ ಎಲ್ಲ ರಸ್ತೆಗಳ ದುರಸ್ತಿ ಮಾಡಬೇಕು. ಕಳೆದ ಸಭೆಯಲ್ಲಿ ಸೂಚಿಸಿದ ೬ ಮೇಲ್ಮಟ್ಟ ಹಳೆಯ ಫಿಲ್ಟರ್‌ಬೆಡ್, ಎಚ್‌ಎಸ್‌ಎಂ ಧನಗರವಾಡ, ಎಸ್‌ಬಿ ಟ್ಯಾಂಕ್, ಶೋರ್‌ಗುಂಬಜ್-ಮದರ್ ಟ್ಯಾಂಕ್ ಹಾಗೂ ಗಣೇಶ ನಗರ ನೀರು ಸಂಗ್ರಹಾಗಾರಗಳ ಕೆಲಸ ಜನವರಿ ಅಂತ್ಯಕ್ಕೆ ಮುಗಿಸಬೇಕು ಎಂದರು.
ಕುಸ್ಸೆಂಪ್ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರ ಕೆ. ಕಾಂತರಾಜ್, ಸ್ಮೇಕ್ ಯೋಜನಾ ಸಮಾಲೋಚಕರ ತಂಡದ ನಾಯಕ ಶಿವಶರಣಪ್ಪ ರಾಯಕೋಟಿ, ಪಾಲಿಕೆ ಕಾರ್ಯಪಾಲಕ ಅಭಿಯಂತರ ಕೆ.ಎಸ್. ಪಾಟೀಲ್ ಹಾಗೂ ಎಲ್ ಆ್ಯಂಡ್ ಟಿ ಕಂಪನಿಯ ಕುಮಾರಸೇನ್ ಇದ್ದರು.