

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದಿಂದ ಯಲ್ಲಮ್ಮವಾಡಿ ಗ್ರಾಮದವರೆಗೆ ನಿರ್ಮಿಸಲಾದ 3 ಕಿ.ಮೀ. ಡಾಂಬರ್ ರಸ್ತೆಯಲ್ಲಿ ಆಳೆತ್ತರದ ತಗ್ಗು -ಗುಂಡಿಗಳು ಬಿದ್ದು, ಹಲವು ದಿನಗಳು ಗತಿಸಿದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ವಾಹನ ಸವಾರರ ಮತ್ತು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿಯಿಂದ ಕೊಕಟನೂರ, ಯಲ್ಲಮ್ಮವಾಡಿ ಮಾರ್ಗವಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ದಿನಂಪ್ರತಿ ಸರಕು ಸಾಗಣೆ ಭಾರಿ ವಾಹನ, ಯಲ್ಲಮ್ಮದೇವಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ನೂರಾರು ವಾಹನ ಸೇರಿದಂತೆ ಸರ್ಕಾರಿ ಬಸ್‌ಗಳು, ದ್ವಿ ಚಕ್ರ ವಾಹನಗಳು ಸಂಚರಿಸುತ್ತವೆ. 3 ಕಿ.ಮೀ. ಡಾಂಬರೀಕರಣ ರಸ್ತೆಯ ಮಧ್ಯದಲ್ಲಿಯೇ ಹಲವು ಕಡೆ ಗುಂಡಿಗಳು ಬಿದ್ದಿವೆ. ಆಯ ತಪ್ಪಿದರೆ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವಂತಾಗಿದೆ. ಗರ್ಭಿಣಿಯರು, ವಯೋವೃದ್ಧರು ಬಸ್‌ನಲ್ಲಿ ಪ್ರಯಾಣಿಸಿದರೆ ಜೀವ ಹೋಗಿ ಬಂದಂತಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಬಸ್, ಕಾರ್‌ನ ಚಕ್ರಗಳು ಸಿಲುಕಿರುವ ಉದಾಹರಣೆಗಳು ಇವೆ. ಇನ್ನು ದ್ವಿಚಕ್ರ ವಾಹನ ಸವಾರರಂತೂ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ರಸ್ತೆ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು.| ಜಯಾನಂದ ಹಿರೇಮಠ ಅಥಣಿ ಪಿಡಬ್ಲೂೃಡಿ ಎಇಇ
| ಮೋಹನ ಪಾಟಣಕರ ಅಥಣಿ ಗ್ರಾಮೀಣ