ರಸ್ತೆ ಡಾಂಬರೀಕರಣ ಕಳಪೆ

10 KRN-1
Published on

ಕೆ.ಆರ್.ನಗರ: ಪಟ್ಟಣದ ಹೃದಯ ಭಾಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿರುವ ನ್ಯೂ ಬಜಾರ್ ರಸ್ತೆ ಡಾಂಬರೀಕರಣಗೊಂಡು ಕೇವಲ ಒಂದು ವಾರ ಕಳೆದಿದೆ. ಅಷ್ಟರಾಗಲೇ ಸಣ್ಣ ಜಲ್ಲಿಕಲ್ಲುಗಳು ಮೇಲೆದಿದ್ದು, ಕಾಮಗಾರಿ ಗುಣಮಟ್ಟ ಬಟಾಬಯಲಾಗಿದೆ.


ಡಾಂಬರೀಕರಣಗೊಂಡ ರಸ್ತೆ ಮೇಲೆ ಜಲ್ಲಿಕಲ್ಲುಗಳು ಹರಡಿಕೊಂಡಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದಕ್ಕೆ ಪುರಸಭೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.


ಪಟ್ಟಣದ ಪುರಸಭೆ ವತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ 4.50 ಲಕ್ಷ ರೂ. ವೆಚ್ಚದಲ್ಲಿ 160 ಮೀಟರ್ ಉದ್ದದ ಈ ರಸ್ತೆ ಡಾಂಬರೀಕರಣ ಕೈಗೆತ್ತಿಕೊಳ್ಳಲಾಗಿತ್ತು. ಏಳೆಂಟು ದಿನಗಳ ಹಿಂದೆ ಕಾಮಾಕ್ಷ್ಮಮ್ಮ ಬ್ಯಾಂಗಲ್ ಸ್ಟೋರ್‌ನಿಂದ ಡಾ.ರಾಜ್‌ಕುಮಾರ್ ಪುತ್ಥಳಿವರೆಗೆ ಡಾಂಬರೀಕರಣ ಮಾಡಲಾಗಿದೆ. ಡಾಂಬರ್ ಹಾಕಿದ ಎರಡು ದಿನಗಳಲ್ಲೇ ಸಣ್ಣ ಸಣ್ಣ ಜಲ್ಲಿಕಲ್ಲುಗಳ(ಚಿಪ್ಸ್) ಜತೆ ಡಾಂಬರ್ ಮೇಲೆದ್ದು ಬಂದಿವೆ. ಇದಕ್ಕೆ ಕಳಪೆ ಗುಣಮಟ್ಟದ ಟಾರು ಬಳಕೆ ಹಾಗೂ ರಸ್ತೆ ಅಗೆದು ಜಲ್ಲಿ ಹರಡಿ ಪೂರ್ಣವಾಗಿ ಮೆಟ್ಲಿಂಗ್ ಮಾಡಿ ನಂತರ ರಸ್ತೆಗೆ ಡಾಂಬರ್ ಹಾಕಬೇಕಿತ್ತು. ಆದರೆ ಈ ರಸ್ತೆಗೆ ಮೆಟ್ಲಿಂಗ್ ಮಾಡದೆ ಕೇವಲ ಅರ್ಧ ಇಂಚಿನಷ್ಟು ಡಾಂಬರ್ ಹಾಕಿರುವುದು ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಅಥವಾ ಆಮೀಷಕ್ಕೆ ಒಳಗಾಗಿಯೋ ಕಳಪೆ ಕಾಮಗಾರಿಗಳನ್ನು ಮಾಡಿಸುವ ಮೂಲಕ ಸರ್ಕಾರದ ಹಣವನ್ನು ಗುತ್ತಿಗೆದಾರರ ಜೇಬಿಗೆ ಸೇರಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.


ಚರಂಡಿಗಳೇ ಇಲ್ಲ: ಈ ರಸ್ತೆಯ ಒಂದು ಬದಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಂಪೌಂಡ್, ಡಾ.ರಾಜ್ ಬಾನಂಗಳ ಹಾಗೂ ಮತ್ತೊಂದು ಬದಿಯಲ್ಲಿ ಅಂಗಡಿ, ಮುಂಗಟ್ಟುಗಳಿದ್ದು, ಈ ಭಾಗದಲ್ಲಿ ಹಿಂದೆ ನಿರ್ಮಿಸಿದ್ದ ಕಲ್ಲಿನ ಚರಂಡಿ ಮುಚ್ಚಿ ಹೋಗಿದ್ದರೆ ಕಾಂಪೌಂಡ್ ಪಕ್ಕದಲ್ಲಿ ಚರಂಡಿಯನ್ನೇ ನಿರ್ಮಿಸಿಲ್ಲ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗಬೇಕಾಗಿದೆ. ರಸ್ತೆಗಳ ಅಭಿವೃದ್ಧಿ ಮಾಡುವಾಗ ನೀರು ಸರಾಗವಾಗಿ ಹೋಗಲು ಚರಂಡಿಯನ್ನು ನಿರ್ಮಿಸಬೇಕಾಗಿರುವುದು ನಿಯಮ. ಆದರೇ ಇಲ್ಲಿ ಆ ನಿಯಮಕ್ಕೆ ತಿಲಾಂಜಲಿ ಇಡಲಾಗಿದೆ.


ಸ್ವಚ್ಛತೆಯೂ ಮರೀಚಿಕೆ: ಕೇವಲ ನೂರು ಮೀಟರ್ ಅಂತರದಲ್ಲಿ 5 ಮದ್ಯದಂಗಡಿಗಳಿರುವುದರಿಂದ ಈ ರಸ್ತೆಯನ್ನು ಬಾರ್‌ಗಳ ರಸ್ತೆ ಎಂದು ಕರೆಯುವುದು ವಾಡಿಕೆಯಾಗಿದೆ. ಇಲ್ಲಿ ಬೆಳಗ್ಗೆಯಿಂದಲೇ ಕುಡುಕರ ಹಾವಳಿ ಹೆಚ್ಚಾಗುವುದರ ಜತೆಗೆ ರಸ್ತೆ ಬದಿಗಳಲ್ಲೇ ಕಂಠಪೂರ್ತಿ ಕುಡಿದು ಮಲಗುವುದು, ಅವಾಚ್ಯ ಶಬ್ದಗಳಿಂದ ಜಗಳ, ಗಲಾಟೆಗಳು ನಡೆಯುತ್ತಲೇ ಇರುವುದರಿಂದ ಈ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸಂಚರಿಸುವುದಿಲ್ಲ.
ಅಲ್ಲದೇ, ಎಲ್ಲೆಂದರಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಪೌಚ್‌ಗಳು, ಸಣ್ಣಪುಟ್ಟ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡುವ ಮಾಂಸ, ಮೀನು, ಮೊಟ್ಟೆ, ಹಣ್ಣುಗಳ ತ್ಯಾಜ್ಯಗಳ ಜತೆಗೆ ಕುಡುಕರು ಕಾಂಪೌಂಡ್ ಪಕ್ಕದಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಪರಿಣಾಮ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಇದೆ.

ಈ ಬಗ್ಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಪುರಸಭಾ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷೃ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಈ ರಸ್ತೆಯನ್ನು ಗುಣಮಟ್ಟದಿಂದ ಅಭಿವೃದ್ಧಿಪಡಿಸಿ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ಪರವಾನಗಿ ರದ್ದುಪಡಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net