

ದೊಡ್ಡಬಳ್ಳಾಪುರ: ಪಟ್ಟಣದ ಖಾಸ್‌ಬಾಗ್-ದರ್ಗಾಪುರ ಭಾಗದ ರೈಲ್ವೆ ಕೆಳಸೇತುವೆ ಬಳಿಯಿಂದ ನಾಗರಕೆರೆ ವಾಕಿಂಗ್ ಟ್ರ್ಯಾಕ್ ಹಾಗೂ ದರ್ಗಾದ ಮಾರ್ಗದಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಸ್ಥಳಕ್ಕೆ ಮಂಗಳವಾರ ಭೇಟಿ ನಿಡಿದ್ದ ಶಾಸಕ ಟಿ. ವೆಂಕಟರಮಣಯ್ಯ ಪರಿಶೀಲಿಸಿದರು.
ರೈಲ್ವೆ ಕೆಳಸೇತುವೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇದರ ಜತೆಯಲ್ಲೇ ಈ ರಸ್ತೆಯನ್ನೂ ದುರಸ್ತಿಗೊಳಿಸುವ ಕೆಲಸ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ನಗರಸಭೆ ಪೌರಾಯುಕ್ತರು, ರೈಲ್ವೆ ಸ್ಟೇಷನ್ ಮಾಸ್ಟರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ಸಂಬಂಧ ಮನವಿಪತ್ರ ಸಲ್ಲಿಸಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಶಾಸಕರ ಎದುರು ಅಹವಾಲು ತೋಡಿಕೊಂಡರು.
ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ಮುಖಂಡ ಕೆ.ಎಲ್. ಶಿವರಾಮ್, ಹಲವು ದಿನಗಳಿಂದ ಈ ಸಮಸ್ಯೆ ನನೆಗುದಿಗೆ ಬಿದ್ದಿದೆ. ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಜನರ ಸಮಸ್ಯೆ ಬಗ್ಗೆ ಅರಿವಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿ ರುವುದಾಗಿ ಹೇಳಿದರು. ನಗರಸಭೆ ಸದಸ್ಯರಾದ ಮಲ್ಲೇಶ್, ನಾಗರಾಜ್, ಮುಖಂಡ ರಾದ ಬಸವರಾಜು, ಸುನೀಲ್, ಸನಾವುಲ್ಲಾ, ಮಹೇಶ್, ಇದ್ದರು.