ರಸ್ತೆ, ಚರಂಡಿ ಕಾಮಗಾರಿ ಅರೆಬರೆ

02rajesh2
Published on

ಚಾಮರಾಜನಗರ: ಅಲ್ಲಲ್ಲಿ ಕಿತ್ತುಬಂದಿರುವ ರಸ್ತೆ, ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ, ಒಡೆದು ಹೋಗಿರುವ ಕುಡಿಯುವ ನೀರಿನ ಪೈಪ್‌ಗಳಿಂದ ಗ್ರಾಮಸ್ಥರು ನಿರಂತರ ಸಮಸ್ಯೆ ಅನುಭವಿಸುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕುದೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗವಾಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಸುಮಾರು 400-450 ಕುಟುಂಬಗಳು ವಾಸ ಮಾಡುತ್ತಿವೆ. ಕಳೆದ 2 ತಿಂಗಳ ಹಿಂದೆ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೇ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಬಡಾವಣೆಯ ಕೆಲವು ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದೆ. ಕೆಲವು ರಸ್ತೆಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರಸ್ತೆಯಲ್ಲಿ ಗುಂಡಿ ತೆಗೆಯಲಾಗಿದ್ದು, ಅವುಗಳನ್ನು ಮುಚ್ಚದೇ ಇರುವ ಪರಿಣಾಮವಾಗಿ ಗ್ರಾಮಸ್ಥರು ಓಡಾಡಲು ತೊಂದರೆ ಉಂಟಾಗಿದೆ.

ಕೆಲವು ಕಡೆಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಿರುವ ಪೈಪ್‌ಗಳು ಒಡೆದು ಹೋಗಿದ್ದು, ಕುಡಿಯುವ ನೀರು ವ್ಯರ್ಥವಾಗಿ ಚರಂಡಿಗೆ ಹರಿಯುವಂತಾಗಿದೆ. ಈ ಸಂಬಂಧ ಗ್ರಾಮಸ್ಥರು ಕುದೇರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾರು ಕೂಡ ಈವರೆಗೂ ಸ್ಪಂದಿಸದೆ ಬಡಾವಣೆಯ ನಿವಾಸಿಗಳು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಂಡಿ ಬಿದ್ದ ರಸ್ತೆಗಳು:

ಎಸ್ಸಿ, ಎಸ್ಟಿ ವಿಶೇಷ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕಳೆದ 3 ತಿಂಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ ಹಲವೆಡೆ ರಸ್ತೆ ಗುಂಡಿಮಯವಾಗಿದೆ. ರಸ್ತೆಯ ನಡುವೆ ಹಿಂದೆ ಇದ್ದ ಡಕ್‌ಗಳನ್ನು ತೆರವು ಮಾಡಿದ್ದು, ಅದನ್ನು ನಿರ್ಮಾಣ ಮಾಡದೇ ಸಂಚಾರ ದುಸ್ತರವಾಗಿದೆ. ಕೆಲವು ರಸ್ತೆಗಳಲ್ಲಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ಚರಂಡಿಗಳು ಈಗಾಗಲೇ ಕಿತ್ತು ಬಂದಿದೆ. ರಸ್ತೆಯ ಬದಿಯಲ್ಲಿ ದೊಡ್ಡ ಗಾತ್ರದ ಕಲ್ಲು ಹಾಗೂ ಸಿಮೆಂಟ್ ಚೂರುಗಳ ರಾಶಿ ಬಿದ್ದಿದ್ದು, ಗ್ರಾಮಸ್ಥರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಕೆಲವು ಗ್ರಾಮಸ್ಥರ ಮನೆಯ ಮುಂಭಾಗದಲ್ಲಿ ಗುಂಡಿ ಬಿದ್ದಿದ್ದು, ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಕಲ್ಲು ಮತ್ತು ಮಣ್ಣು ಮಿಶ್ರಿತ ರಸ್ತೆಯಲ್ಲಿ ವಾಹನ ಸಂಚಾರ ಮಾಡಲು ಹಾಗೂ ನಡೆದಾಡಲು ಜನರು ತೊಂದರೆ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಹಾಗೂ ಗ್ರಾಮದ ನಿವಾಸಿ ರಾಜ್ಗುರು ವಿಜಯವಾಣಿ ಜತೆಗೆ ಮಾತನಾಡಿ ಒತ್ತಾಯಿಸಿದರು.

ವ್ಯರ್ಥವಾಗಿ ಹರಿಯುತ್ತಿರುವ ನೀರು:

ರಸ್ತೆ ಮತ್ತು ಚರಂಡಿ ಕಾಮಗಾರಿಯ ನಡುವೆ ಜುಲೈ ಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಗುಂಡಿಯನ್ನು ತೋಡಿದ್ದು, ಯಾವುದನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಸಮಸ್ಯೆ ಉಂಟಾಗಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗಳು ಹಲವಾರು ಕಡೆಗಳಲ್ಲಿ ಅಡೆದುಹೋಗಿದ್ದು, ಕುಡಿಯುವ ನೀರು ಚರಂಡಿಗೆ ವ್ಯರ್ಥವಾಗಿ ಹರಿಯುತ್ತಿದೆ. ಬೇಸಿಗೆ ಕಾಲದಲ್ಲಿ ಕೆಲವು ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೇ ಹೆಗ್ಗವಾಡಿ ಗ್ರಾಮದಲ್ಲಿ ಸತತ 2-3 ಗಂಟೆಗಳ ಕಾಲ ಪೂರೈಕೆ ಮಾಡುವ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಈ ವರೆಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪಿಡಿಓ ಕಾರ್ಯವೈಖರಿಗೆ ಆಕ್ರೋಶ:

ಗ್ರಾಮದಲ್ಲಿ ವಿಳಂಬವಾಗಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಕಾಮಗಾರಿ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯದಿಂದ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕಾಮಗಾರಿಯ ವಿಳಂಬದ ಕುರಿತು ಗ್ರಾಮಸ್ಥರು ದೂರು ನೀಡಿದರೆ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಗ್ರಾಮ ಪಂಚಾಯಿತಿ ವತಿಯಿಂದ ಎಸ್ಸಿ, ಎಸ್ಟಿಗಳ ವಿವಿಧ ಯೋಜನೆಗಳ ಲಾನುಭವಿಗಳಿಗೆ ಇಂದಿಗೂ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಮೇಲಾಧಿಕಾರಿಗಳು ಪಿಡಿಓ ವಿರುದ್ಧ ಕ್ರಮವಹಿಸುವಂತೆಯೂ ಆಗ್ರಹ ಕೇಳಿಬಂದಿದೆ.

ಗ್ರಾಮದಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿ ಕಳೆದ 3 ತಿಂಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಕುಡಿಯುವ ನೀರಿನ ಪೈಪ್‌ಗಳು ಒಡೆದು, ವ್ಯರ್ಥವಾಗಿ ನೀರು ಚರಂಡಿಗೆ ಹರಿಯುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

-ರಾಜ್‌ಗುರು, ಸಾಮಾಜಿಕ ಹೋರಾಟಗಾರ ಮತ್ತು ಗ್ರಾಮಸ್ಥ, ಹೆಗ್ಗವಾಡಿ, ಚಾಮರಾಜನಗರ

ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದ್ದು, ಹಬ್ಬವಿದ್ದ ಪರಿಣಾಮವಾಗಿ ವಿಳಂಬವಾಗಿತ್ತು. ಈಗಾಗಲೇ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು. ನೀರಿನ ಸಮಸ್ಯೆ ಬಗೆಹರಿಸಲಾಗುವುದು.

-ಗೋವಿಂದಯ್ಯ, ಪಿಡಿಓ, ಕುದೇರು ಗ್ರಾ.ಪಂ, ಚಾಮರಾಜನಗರ

ಜೆಜೆಎಂ ಕಾಮಗಾರಿ ನಡೆಸುವಾಗಿ ರಸ್ತೆಗಳನ್ನು ಅಗೆದಿರುವ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ. ಅದನ್ನು ಅವರೇ ಸರಿಪಡಿಸಬೇಕಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.

-ನಂದೀಶ್, ಇಂಜಿನಿಯರ್, ನಿರ್ಮಿತಿ ಕೇಂದ್ರ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net