ರಸ್ತೆ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ

ರಸ್ತೆ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ
Published on

ಬೇಲೂರು : ತಾಲೂಕಿನ ನವಿಲಹಳ್ಳಿ-ಕೋಟಿಗಾನಹಳ್ಳಿ ಹಾಗೂ ಗಬ್ಬಲಗೋಡು ಸೇರಿದಂತೆ ಇತರೆ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆ ಗುಂಡಿಗೆ ಬಾಳೆ ಗಿಡಗಳನ್ನು ನೆಟ್ಟು ಸೋಮವಾರ ಪ್ರತಿಭಟಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿ, ಮಲೆನಾಡು ಭಾಗದ ಗ್ರಾಮಗಳ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಭರವಸೆ ನೀಡಿರುವ ಶಾಸಕರ ಹೇಳಿಕೆ ಹುಸಿಯಾಗಿದೆ. ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ನವಿಲಹಳ್ಳಿ ಗಡಿಯಿಂದ 10 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಾಲ್ಕು ವರ್ಷದಿಂದ ಗುಂಡಿ ಬಿದ್ದಿದ್ದರೂ ತಿರುಗಿ ನೋಡುತ್ತಿಲ್ಲ. ಪ್ರತಿಯೊಬ್ಬ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತ್ತಾಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಉದ್ದೇಶದಿಂದ ತರಾತುರಿಯಲ್ಲಿ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಅವರ ಪಕ್ಷದ ಕಾರ್ಯಕರ್ತರಿದ್ದರೂ ಸ್ಪಂದಿಸುವ ಕೆಲಸ ಮಾಡಿಲ್ಲ. ಶಾಸಕರು ಇದೇ ರೀತಿ ಮುಂದುವರಿದರೆ ಮಲೆನಾಡು ಭಾಗದ ಜನರೊಂದಿಗೆ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಸದಸ್ಯ ಶಶಿಕುಮಾರ್ ಮಾತನಾಡಿ, ಅಭಿವೃದ್ಧಿ ಮಾಡಿದ್ದೇವೆ ಎಂದು ಸುಳ್ಳು ಹೇಳುವ ಶಾಸಕರು ಈ ಭಾಗದಲ್ಲಿ ಒಮ್ಮೆ ಸಂಚರಿಸಲಿ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಮಳೆಗಾಲದಲ್ಲಂತೂ ನಡೆದಾಡಲು ಆಸಾಧ್ಯವಾಗಿದೆ. ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ತೌಫಿಕ್ ಅವರು ಗೆದ್ದ ನಂತರ ಇತ್ತ ತಿರುಗಿಯೂ ನೋಡಲಿಲ್ಲ. ತಕ್ಷಣವೇ ಶಾಸಕರು ಮತ್ತು ಅಧಿಕಾರಿಗಳು ಈ ರಸ್ತೆ ದುರಸ್ತಿ ಪಡಿಸದಿದ್ದರೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.

ರೈತ ಸಂಘದ ಬಸವರಾಜ್, ಸ್ಥಳೀಯ ಗ್ರಾಮಸ್ಥರಾದ ನಿತಿನ್, ಸುರೇಶ್, ವೆಂಕಟೇಶ್, ಶ್ರೀನಿವಾಸ್ ಪುಟ್ಟಸ್ವಾಮಿ, ರಮೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net