

ಕೊಟ್ಟೂರು: ಪಟ್ಟಣದಲ್ಲಿ ರಸ್ತೆ ಗುಂಡಿಗಳನ್ನು ಹಸಿರು ಹೊನಲು ತಂಡದ ಸದಸ್ಯರು ಸೋಮವಾರ ಮಣ್ಣು ಹಾಕಿ ಮುಚ್ಚಿದರು.
ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದವು. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು. ರಸ್ತೆ ಗುಂಡಿಗಳನ್ನು ಮುಚ್ಚಿಸಿ ಎಂದು ಲೋಕೋಪಯೋಗಿ ಇಲಾಖೆಗೆ ಹಲವು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹಸಿರು ಹೊನಲು ತಂಡದ ಬಂಜಾರ ನಾಗರಾಜ್, ನಂದಿ ವಿಕ್ರಂ, ಗುರುರಾಜ್, ಉದಯಕುಮಾರ್, ನಾಗಭೂಷಣ, ಪ್ರಕಾಶ, ದೊಡ್ಡ ಕೊಟ್ರೇಶ, ವಿಜಯ್, ಚೇತನ, ಪ್ರಶಾಂತ ಪತ್ತಿಕೊಂಡ, ಯಲ್ಲಪ್ಪ, ಕವೀಂದ್ರ ಮುಂತಾದವರು ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿದರು. ಈ ಸಾಮಾಜಿಕ ಕಾರ್ಯ ನೋಡಿ ವ್ಯಕ್ತಿಯೊಬ್ಬರು ನೆರವಿಗಾಗಿ ಜೆಸಿಬಿ ಕಳಿಸಿದ್ದರು. ಈ ಮೂಲಕ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.