

ಮುದ್ದೇಬಿಹಾಳ: ಪಟ್ಟಣದ ಮಹೆಬೂಬ ನಗರದಿಂದ ನಾಲತವಾಡ ಸಂಪರ್ಕಿಸುವ ರಸ್ತೆಗೆ ಅರ್ಧಮರ್ಧ ಡಾಂಬರೀಕರಣ ಮಾಡಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದು ಈ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಿ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸುವಂತೆ ಪಿಡಬ್ಲುೃಡಿ ಅಧಿಕಾರಿಗಳಿಗೆ ಲೋಕಾಯುಕ್ತ ಸಿಪಿಐ ಆನಂದ ಠಕ್ಕನ್ನವರ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಾಧ್ಯಮದವರು ಸಾರ್ವಜನಿಕರ ಬೇಡಿಕೆಯಾಗಿರುವ ನಾಲತವಾಡ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಮೌಖಿಕವಾಗಿ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಪಿಡಬ್ಲುೃಡಿ ಇಲಾಖೆಯ ಎಇ ರಾಜು ಚವ್ಹಾಣ ಅವರಿಂದ ವಿವರಣೆ ಪಡೆದುಕೊಂಡ ಲೋಕಾಯುಕ್ತರು ತ್ವರಿತವಾಗಿ ಕೆಲಸ ಪೂರ್ಣಗೊಳಿಸಿ ಆ ಕುರಿತಾಗಿ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡದೇ ಮಾಡಿಕೊಡಬೇಕು. ಯಾವುದೇ ದೂರುಗಳಿಗೆ ಆಸ್ಪದ ಇಲ್ಲದಂತೆ ನಡೆದುಕೊಳ್ಳಬೇಕು. ಪ್ರತಿ ತಿಂಗಳು ಜಿಲ್ಲೆಯ ಒಂದು ತಾಲೂಕಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಲೋಕಾಯುಕ್ತರು ಸೂಚನೆ ನೀಡಿದ್ದರಿಂದ ಸಭೆ ನಡೆಸಲಾಗುತ್ತಿದೆ. ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲನೆ ನಡೆಸುತ್ತೇವೆ. ಸಾರ್ವಜನಿಕರು ಸಲ್ಲಿಸಿದ ದೂರನ್ನು ತ್ವರಿತವಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡುವುದಾಗಿ ತಿಳಿಸಿದರು.
ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಕರೆದು ಮಾತನಾಡಿದ ಅಧಿಕಾರಿ ಆನಂದ ಅವರು, ರೈತರ ಹೊಲಗಳಿಗೆ ಕಾಲುವೆಗಳು ಸಮರ್ಪಕವಾಗಿಲ್ಲದ ಕಾರಣ ದೂರುಗಳು ಸಲ್ಲಿಕೆಯಾಗುತ್ತಿವೆ. ಕಾಲುವೆಯ ಹೂಳು ತೆಗೆಯುವುದು, ಒಡೆದಿರುವ ಕಾಲುವೆಗಳ ದುರಸ್ತಿ ಮಾಡಿಸುವುದು ಸೇರಿದಂತೆ ರೈತರಿಗೆ ನೆರವಾಗುವ ಕಾರ್ಯವನ್ನು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಡಬೇಕು ಎಂದರು.
ತಾಳಿಕೋಟೆ ತಹಸೀಲ್ದಾರ್ ಕೀರ್ತಿ ಚಾಲಕ, ಮುದ್ದೇಬಿಹಾಳ ಪ್ರಭಾರ ತಹಸೀಲ್ದಾರ್ ಸಿ.ಎ. ಗುಡದಿನ್ನಿ ಮಾತನಾಡಿದರು. ಲೋಕಾಯುಕ್ತ ಪಿಐ ಆನಂದ ದೋಣಿ, ಸಿಬ್ಬಂದಿ ಗುರು ಹಡಪದ, ಶಂಕರ ಲಮಾಣಿ, ಎಸ್.ಐ. ಅಮರಖೇಡ, ಆನಂದ ಪಡಶೆಟ್ಟಿ, ವಾಸೀಂ ಅಕ್ಕಲಕೋಟ, ಮಾಳಪ್ಪ ಸಲಗೊಂಡ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.