ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರತಿಭಟನೆ

15.kkr.2
Published on

ಕಿಕ್ಕೇರಿ: ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದರ ಜತೆಗೆ ಧೂಳಿನಿಂದ ಮುಕ್ತಿ ನೀಡುವಂತೆ ಒತ್ತಾಯಿಸಿ ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.


ವರ್ಷದ ಹಿಂದೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕುಂಠುತ್ತಾ ಸಾಗುತ್ತಿದೆ. ಶಾಲೆಯ ಎದುರಿನ ರಸ್ತೆಯಲ್ಲಿ ಜಲ್ಲಿ ತುಂಬಿ ಹಾಗೆಯೇ ಬಿಟ್ಟಿದ್ದು ಸಣ್ಣ ವಾಹನ ಸಾಗಿದರೂ ಶಾಲೆ ಸೇರಿದಂತೆ ಸುತ್ತಮುತ್ತಲ ಮನೆಗಳಿಗೆ ನಿರಂತರವಾಗಿ ಧೂಳು ಸೇರುತ್ತಿದೆ. ಮಧ್ಯಾಹ್ನದ ಬಿಸಿಯೂಟ್ಕಕೆ ಕೂರಲು ಪರದಾಡುವಂತಾಗಿದೆ. ಧೂಳಿನಿಂದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶಾಲೆಯಲ್ಲಿ ಕುಳಿತು ಪಾಠ ಕೇಳಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು, ಪಾಲಕರು ದೂರಿದರು.


ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್ ಮಾತನಾಡಿ, ಕಾಮಗಾರಿ ನೆಪದಲ್ಲಿ ರಸ್ತೆ ಬಗೆದು ಜಲ್ಲಿಕಲ್ಲು ಹಾಕಿರುವುದಷ್ಟೇ ಭಾಗ್ಯ. ಚರಂಡಿ ನಿರ್ಮಿಸದೆ, ವಿದ್ಯುತ್ ಕಂಬ ಬದಲಾಯಿಸದೆ ಕಾಟಾಚಾರಕ್ಕೆ ಕಾಮಗಾರಿ ಮಾಡಲಾಗುತ್ತಿದೆ. ಧೂಳಿನಿಂದಾಗಿ ಮಕ್ಕಳು ಅನಾರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆೆ ಎಂದು ಆರೋಪಿಸಿದರು.


ಈ ಸಂಬಂಧ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಇಇ ಪುಟ್ಟರಾಜು, ಗ್ರಾಮದಲ್ಲಿ ವಿದ್ಯುತ್ ಕಂಬ ಬದಲಾವಣೆಗೆ ಸಮಸ್ಯೆಯಾಗಿತ್ತು. ಈಗ ಪರಿಹಾರವಾಗಿದೆ. ಶೀಘ್ರ ಗುಣಮಟ್ಟದ ಕಾಮಗಾರಿ ಮಾಡಲು, ತಾತ್ಕಾಲಿಕವಾಗಿ ಧೂಳು ಬಾರದಂತೆ ಟ್ಯಾಂಕರ್ ಮೂಲಕ ನೀರು ಸಿಂಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿ ನಡೆಯದೆ ಶಾಲೆಯ ಮಕ್ಕಳು ಧೂಳಿನಿಂದ ಬಳಲುವಂತಾಗಿದೆ. ತುರ್ತು ಕಾಮಗಾರಿ ಆರಂಭಿಸಿ ತೊಂದರೆಯಾಗದಂತೆ ಗಮನಹರಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಸೀತಾರಾಮು ತಿಳಿಸಿದ್ದಾರೆ.


ಗ್ರಾಪಂ ಉಪಾಧ್ಯಕ್ಷೆ ಸುಧಾರಾಣಿ, ಮಹದೇವಪ್ಪ, ರಾಘವೇಂದ್ರ, ರಾಜೇಶ್, ಪ್ರಕಾಶ್, ಈರಪ್ಪ, ರವಿ, ಲತಾ, ದಿವ್ಯಾ, ಶೈಲಜಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net