ಚಾಮರಾಜನಗರ: ತಾಲೂಕಿನ ನಂಜೇದೇವನಪುರದಿಂದ ಕಗ್ಗಳಿಪುರ ಮಾರ್ಗವಾಗಿ ತಮ್ಮಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರಾಧಿಕಾರದಿಂದ 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ, ಆ ಗ್ರಾಮಗಳ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ ಈ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತದೆ. ಈ ಮೂಲಕ ರೈತರು ತಾವು ಬೆಳೆದ ಫಸಲನ್ನು ಮತ್ತೊಂದು ಕಡೆಗೆ ಸಾಗಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ನಮ್ಮ ಕ್ಷೇತ್ರದ ವ್ಯಾಪ್ತಿಯ ಅನೇಕ ರಸ್ತೆಗಳನ್ನು ಗುರುತಿಸಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಉತ್ತಮ ರಸ್ತೆಯನ್ನು ನಿರ್ಮಿಸಬೇಕು ಎಂದು ಹೇಳಿದರು.
7 ಕೋಟಿ ರೂ. ಬಿಡುಗಡೆ:
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ 7 ಕೋಟಿ ರೂ. ಬಿಡುಗಡೆ ಮಾಡಿದ್ದು, ನಾನು ಅಧ್ಯಕ್ಷನಾದ ಬಳಿಕ ಈ ಎಲ್ಲ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಕಾಡಾ ವ್ಯಾಪ್ತಿಗೆ ಚಾ.ನಗರ ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳು ಸೇರ್ಪಡೆಯಾಗಿವೆ. ಹೀಗಾಗಿ ಹಿಂದುಳಿದ ಹಾಗೂ ಗಡಿ ಜಿಲ್ಲೆಯ ಚಾಮರಾಜನಗರದ ರೈತರಿಗೆ ಹೆಚ್ಚಿನ ಅನುಕೂಲವಾಗ ನಿಟ್ಟಿನಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಜಲಾನಯನ ವ್ಯಾಪ್ತಿಗೆ ಬರುವ ಕೆರೆಗಳು, ರೈತರು ಜಮೀನುಗಳಿಗೆ ತೆರಳು ರಸ್ತೆಗಳು, ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ತ್ವರಿತ ಗತಿಯಲ್ಲಿ ಕಾಡಾದಿಂದ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮಡಹಳ್ಳಿ ಮಾರ್ಗದಲ್ಲಿ ಶ್ರೀ ವರಹನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕೈಗೊಂಡಿದ್ದು, ದೇವಸ್ಥಾನದ ಮುಂಭಾಗದಲ್ಲಿ ಗರುಡ ಧ್ವಜ ಸ್ಥಾಪನೆಗೆ ಹಣ ನೀಡುವಂತೆ ದೇವಸ್ಥಾನದ ಸಮಿತಿಯವರು ಶಾಸಕ ಪುಟ್ಟರಂಗಶೆಟ್ಟರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಶಾಸಕರು ಸಹ ಸಮ್ಮತಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ನಂಜೇದೇವನಪುರ ಮಠಾಧ್ಯಕ್ಷರಾದ ರಾಜೇಂದ್ರಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಶೇಖರಪ್ಪ, ಉಪಾಧ್ಯಕ್ಷ ಪಟೇಲ್ ಗುರುಮಲ್ಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ. ಶಿವಸ್ವಾಮಿ, ಮುಖಂಡರಾದ ಪಿ.ರಾಜಣ್ಣ, ಪಿ. ಗುರುಮಲ್ಲಪ್ಪ, ಗೌಡಿಕೆ ನಾಗೇಶ್, ಗ್ರಾಪಂ ಮಾಜಿ ಸದಸ್ಯ ಮಹೇಶ್, ಡೇರಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಸದಸ್ಯರಾದ ಶಾಂತಪ್ಪ, ಬಸವೇಗೌಡ, ಎಸ್.ರಾಜೇಶ್, ಕೊಂಗಳಪ್ಪ, ಎನ್.ಎಂ ನಾಗರಾಜು, ಸುನೀಲ್, ವಿರೂಪಾಕ್ಷ, ಉಡಿಗಾಲ ಶೇಖರಪ್ಪ, ಭರತ್, ಪ್ರಸಾದ್,, ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಗಣೇಶ್ ಪ್ರಸಾದ್, ಗುತ್ತಿಗೆದಾರ ಹೇಮಂತ್ ಇತರರು ಇದ್ದರು.