

ಬೇಲೂರು : ತಾಲೂಕಿನ ಹೆಬ್ಬಾಳು-ಕಲ್ಲಹಳ್ಳಿಯಿಂದ ಹನಿಕೆಸಂತೆಗೆ ಸಂಪರ್ಕ ಕಲ್ಪಿಸುವ ನಕಾಶೆ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಹೆಬ್ಬಾಳು, ದೊಡ್ಡಬ್ಯಾಡಿಗೆರೆ, ಕಲ್ಲಹಳ್ಳಿ, ಜೋಗಿಹಳ್ಳಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಒತ್ತುವರಿ ಕಾರಣ ಈ ಭಾಗದ ರೈತರು ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಸರ್ಕಾರ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ದೊಡ್ಡಬೇಡಗೆರೆ ರೈತ ಮಲ್ಲಿಕಾರ್ಜುನ, ಈ ಹಿಂದೆ ಜಾನುವಾರುಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದ ಹನಿಕೆ ಸಂತೆಗೆ ದನ ಕರುಗಳು ಮತ್ತು ಸಾರ್ವಜನಿಕರು ತೆರಳುವುದಕ್ಕಾಗಿ ಹೆಬ್ಬಾಳು, ಕಲ್ಲಹಳ್ಳಿ, ಜೋಗಿಹಳ್ಳಿ, ದೊಡ್ಡಬ್ಯಾಡಿಗೆರೆ ಮೂಲಕ ನಕಾಶೆ ರಸ್ತೆ ಇತ್ತು. ಆದರೆಕಾಲ ಕ್ರಮೇಣ ರಸ್ತೆಯನ್ನು ಪಕ್ಕದ ಜಮೀನಿನ ಮಾಲೀಕರುಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಹನಿಕೆ ಸಂತೆ ಹಾಗೂ ಮುಂಭಾಗದ ಜಮೀನಿಗಳಿಗೆ ಹೋಗಲು ಮತ್ತು ಫಸಲು ಸಾಗಾಟ ಮಾಡಲು ಮಾರ್ಗ ಇಲ್ಲದಂತಾಗಿದೆ. ಬೆಳೆಯನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದ ಸ್ಥಿತಿ ಎದುರಾಗಿದೆ. ಅದಕ್ಕಾಗಿ ದಲ್ಲಾಳಿಗಳು ಕೇಳುವ ಬೆಲೆಗೆ ಫಸಲು ಕೊಡುವಂತಾಗಿದೆ. ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು. ರಸ್ತೆ ಒತ್ತುವರಿ ತೆರವುಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.