

ತುಮಕೂರು: ನಗರದ ಬಿ.ಎಚ್.ರಸ್ತೆಯಲ್ಲಿ ಸಂಚಾರ ಸುವ್ಯವಸ್ಥೆ ಸುಧಾರಣೆಗೆ ಪೊಲೀಸರು ದಿಟ್ಟ ಕ್ರಮ ಕೈಗೊಂಡಿರುವುರಾದರೂ ಬಂದ್ ಮಾಡಲಾಗಿದ್ದ ರಸ್ತೆ ವಿಭಜಕ ತೆರವುಗೊಳಿಸಿದ ಬಳಿಕ ರಸ್ತೆ ಉಬ್ಬು (ಹಂಪ್ಸ್) ನಿರ್ಮಿಸದೇ ಇರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ತುಮಕೂರು ವಿವಿ ಮುಂಭಾಗದಲ್ಲಿ ಬಿ.ಎಚ್.ರಸ್ತೆಯ (ಶಿವಕುಮಾರಸ್ವಾಮೀಜಿ ರಸ್ತೆ) ಡಿವೈಡರ್ ಬಂದ್ ಮಾಡಿದ ಬಳಿಕ ಕುವೆಂಪು ನಗರದಿಂದ ಬಿ.ಎಚ್.ರಸ್ತೆ ಸೇರುವ ಭಾಗದಲ್ಲಿ ರಸ್ತೆವಿಭಜಕ ತೆರವುಗೊಳಿಸಲಾಗಿದೆ. ಹನುಮಂತಪುರ, ಕುವೆಂಪುನಗರದ ಭಾಗದಿಂದ ಬಂದವರು ವಿವಿ ಮುಂಭಾಗದಲ್ಲಿ ಅಡ್ಡಾದಿಡ್ಡಿ ಚಲುಸುತ್ತಿದ್ದಕ್ಕೆ ಬ್ರೇಕ್ ಬಿದ್ದಂತಾಗಿದೆ.
ಅಪಘಾತ ತಡೆಯಲು ರಸ್ತೆ ಉಬ್ಬು: ವಾಹನ ದಟ್ಟಣೆಯಿಂದ ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲಕುಮಾರ್ ಶಹಾಪೂರವಾಡ್ ತೆಗೆದುಕೊಂಡ ಕ್ರಮದಿಂದ 20 ದಿನಗಳಿಂದ ಈ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಈ ಮಧ್ಯೆ ಬಿ.ಎಚ್.ರಸ್ತೆಗೆ ಕುವೆಂಪುನಗರ ಭಾಗದಿಂದ ವೇಗವಾಗಿ ವಾಹನ ಸವಾರರು ನುಗ್ಗುತ್ತಿರುವುದರಿಂದ ವಿಘ್ನೇಶ್ವರ ಕಂಫರ್ಟ್ಸ್ ಮುಂಭಾಗ ತಾತ್ಕಾಲಿಕವಾಗಿ ಬ್ಯಾರಿಕೇಡ್ ಹಾಕಿ ವಾಹನಗಳ ವೇಗಕ್ಕೆ ತಡೆಯೊಡ್ಡಿ ಅಪಘಾತಗಳನ್ನು ತಪ್ಪಿಸಲು ಸಂಚಾರ ಪೊಲೀಸರು ಕ್ರಮಕೈಗೊಂಡಿರುವರಾದರೂ ಬಿ.ಎಚ್.ರಸ್ತೆಯ ಎರಡು ಕಡೆ ರಸ್ತೆ ಉಬ್ಬು ಅಗತ್ಯವಿದೆ.
ಅಶೋಕನಗರದಿಂದ, ಮತ್ತೊಂದು ಕಡೆ ಕುವೆಂಪು ನಗರದಿಂದ ಬಿ.ಎಚ್.ರಸ್ತೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತತ್ಕ್ಷಣವೇ ರಸ್ತೆ ಉಬ್ಬು (ಹಂಪ್ಸ್ ) ಹಾಕಿ ಪ್ರಾಣಹಾನಿ ತಪ್ಪಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ. ರಸ್ತೆ ವಿಭಜಕ ತೆರವುಗೊಳಿಸಿದಷ್ಟೇ ವೇಗವಾಗಿ ಪೊಲೀಸರು ರಸ್ತೆ ಉಬ್ಬು ನಿರ್ಮಿಸುವರೇ ಕಾದುನೋಡಬೇಕಿದೆ.
ಬಿ.ಎಚ್.ರಸ್ತೆಯಲ್ಲಿ ರಸ್ತೆ ವಿಭಜಕ ತೆರವುಗೊಳಿಸಿದ ಬಳಿಕ ತಾತ್ಕಾಲಿಕವಾಗಿ ಬ್ಯಾರಿಕೇಡ್ ಹಾಕಲಾಗಿದೆ. ಆದರೂ, ವಾಹನಗಳ ವೇಗಕ್ಕೆ ತಡೆಯೊಡ್ಡಲು ರಸ್ತೆ ಉಬ್ಬು ನಿರ್ಮಿಸಬೇಕಿದೆ. ಇನ್ನೆರಡು ದಿನಗಳಲ್ಲಿ ಕ್ರಮವಹಿಸಲಾಗುವುದು. > ರಾಹುಲಕುಮಾರ್ ಶಹಾಪೂರವಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತಪುರ, ಕುವೆಂಪು ನಗರದ ಭಾಗದಿಂದ ಬಿ.ಎಚ್.ರಸ್ತೆ ಪ್ರವೇಶಿಸುವ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚೆತ್ತುಕೊಂಡು ರಸ್ತೆ ಉಬ್ಬು ನಿರ್ಮಿಸಬೇಕು. ಇಲ್ಲವಾದಲ್ಲಿ ಜನರ ಹಿತಕ್ಕಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. > ಬೆಳಗುಂಬ ವೆಂಕಟೇಶ್, ಸಾಮಾಜಿಕ ಹೋರಾಟಗಾರ