

ಅಫಜಲಪುರ: ಮುಖ್ಯ ರಸ್ತೆ ಎರಡೂ ಬದಿಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿ ಅಗಲೀಕರಣಕ್ಕೆ ತೊಡಕಾಗಿದ್ದ ಅನಧಿಕೃತ ಶೆಡ್‌ಗಳನ್ನು ಪೊಲೀಸ್ ಬಂದೋಬಸ್ತ್ ಮಧ್ಯೆ ಪುರಸಭೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ನಗರೋತ್ಥಾನ ಹಂತ ೪ರಡಿ ಅಂದಾಜು ೪೩೫.೩೦ ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ವೃತ್ತದಿಂದ ತಹಸಿಲ್‌ವರೆಗೆ ರಸ್ತೆ ಅಗಲೀಕರಣ, ಚರಂಡಿ ಮತ್ತು ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಅನುಮೋದನೆ ದೊರೆತಿತ್ತು. ಇತ್ತೀಚೆಗಷ್ಟೆ ಶಾಸಕ ಎಂ.ವೈ. ಪಾಟೀಲ್ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದರು. ಹೀಗಾಗಿ ಮೊದಲ ಹಂತವಾಗಿ ರಸ್ತೆ ಆಕ್ರಮಿಸಿದ ಗೂಡಂಗಡಿಗಳ ತೆರವು ಮಾಡಲಾಯಿತು.
ರಸ್ತೆಯ ಎರಡೂ ಬದಿಯಲ್ಲಿದ್ದ ಗೂಡಂಗಡಿಗಳ ತೆರವಿನಿಂದ ವ್ಯಾಪಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಸುಮಾರು ೧೦೦ ಕುಟುಂಬಗಳು ಬೀದಿಗೆ ಬಂದಿವೆ. ಸಣ್ಣ-ಪುಟ್ಟ ವ್ಯಾಪಾರ ನಂಬಿದವರು ಜೀವನ ಸಾಗಿಸುವುದು ಹೇಗೆ? ಪುರಸಭೆ ಅಧಿಕಾರಿಗಳು ಶೆಡ್ ತೆರವುಗೊಳಿಸುವ ಮುನ್ನ ವ್ಯಾಪಾರಕ್ಕೆ ಬೇರೆಡೆ ಸ್ಥಳ ಗುರುತಿಸಿ ಅನುಕೂಲ ಮಾಡಬೇಕಿತ್ತು ಎಂದು ಬೀದಿ ಬದಿ ವ್ಯಾಪಾರಿಗಳಾದ ಸುನೀಲ ಬಳೂರ್ಗಿ, ರೇವಪ್ಪ ಕಡಕೋಳ, ಮೈಬೂಬ್ ಮುಜಾವರ್ ಇತರರು ಗೋಳು ತೋಡಿಕೊಂಡರು.
ತಹಸೀಲ್ದಾರ್ ಸಂಜೀವಕುಮಾರ ದಾಸರ, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಸಿಪಿಐ ಪಂಡಿತ ಸಗರ, ಪಿಎಸ್‌ಐ ಮಡಿವಾಳಪ್ಪ ಬಾಗೋಡಿ ಇತರರಿದ್ದರು.
ರಸ್ತೆ ಅಗಲೀಕರಣಕ್ಕಾಗಿ ನನ್ನ ಶೆಡ್ ತೆರವುಗೊಳಿಸಲಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅಂಗಡಿ ಆರಂಭಿಸಿದ್ದೆ. ಇದೀಗ ಶಾಪ್ ತೆರವು ಮಾಡಿದ್ದರಿಂದ ಸಾಲ ತೀರಿಸುವುದು ಸವಾಲಾಗಿದೆ. ಪುರಸಭೆ ಅಧಿಕಾರಿಗಳು ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
| ಸುನೀಲ್ ಬಳೂರ್ಗಿ ರಸ್ತೆ ಬದಿ ವ್ಯಾಪಾರಿ
ರಸ್ತೆ ಅಗಲೀಕರಣದಲ್ಲಿ ಅಕ್ರಮ ಶೆಡ್ ಕಳೆದುಕೊಂಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳ ಸಭೆ ಕರೆದು ನಿರ್ಣಯಿಸಲಾಗುವುದು. ಅಂಬೇಡ್ಕರ್ ವೃತ್ತದಿಂದ ಹಳೆಯ ಪುರಸಭೆ ಕಟ್ಟಡದವರೆಗೆ ರಸ್ತೆಯಲ್ಲಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಗುವುದು. ಶೀಘ್ರದಲ್ಲೇ ಅಫಜಲಪುರ-ಸೊಲ್ಲಾಪುರ ರಸ್ತೆ ಬದಿಯ ಶೆಡ್ ತೆರವು ಕಾರ್ಯಾಚರಣೆ ನಡೆಯಲಿದೆ.
| ಎಂ.ವೈ.ಪಾಟೀಲ್ ಶಾಸಕ
ಶನಿವಾರ ರಸ್ತೆ ಅಗಲೀಕರಣ ಕರ‍್ಯಾಚರಣೆ ಮುಗಿದಿದೆ. ಕೆಲವು ಕಟ್ಟಡಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಮಾಲೀಕರಿಗೆ ತಿಳಿಸಲಾಗಿದೆ. ರಸ್ತೆ ಬದಿಯಲ್ಲಿ ೫೦ ಮರಗಳಿದ್ದು, ಕಟಾವಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸರ್ಕಾರಿ ಕಚೇರಿಗಳ ಕಾಂಪೌಂಡ್, ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕೆಲಸ ಗುತ್ತಿಗೆದಾರರಿಗೆ ಒಪ್ಪಿಸಲಾಗಿದೆ.
| ವಿಜಯ ಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ