ರಸ್ತೆ ಅಭಿವೃದ್ಧಿಗೆ ರೂ.1 ಕೋಟಿ ಅನುದಾನ ಭರವಸೆ

kdr road
ಕಡೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಸವಿತಾ, ಕೃಷ್ಣಮೂರ್ತಿ, ನಂದೀಶ್ ಬಾಬು ಇತರರಿದ್ದರು.
Published on

ಕಡೂರು: ಮತಿಘಟ್ಟ, ಮಾಡಾಳು ಮುಖ್ಯರಸ್ತೆಯಿಂದ ಲಕ್ಕೇನಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬುಧವಾರ ಲಕ್ಕೇನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಲಕ್ಕೇನಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ ಇರಲಿಲ್ಲ. ಮತಯಾಚನೆಗೆ ಬಂದಾಗ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಸ್ತೆ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದ್ದೆ. ಅದರಂತೆ 1.8 ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ 50 ಲಕ್ಷ ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ 1 ಕೋಟಿ ಒದಗಿಸಲಾಗುವುದು ಎಂದರು.

ಲಕ್ಕೇನಹಳ್ಳಿ ಮತ್ತು ಬಾಣನಹಳ್ಳಿ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗಬೇಕಿದೆ. ಅದಕ್ಕಾಗಿ 4.5 ಕೋಟಿ ಹಣ ಒದಗಿಸಲಾಗುವುದು. ಮತಿಘಟ್ಟ-ಬೀರನಹಳ್ಳಿ ರಸ್ತೆ ಅಭಿವೃದ್ಧಿಗೆ 1 ಕೋಟಿ ಮೀಸಲಿಡಲಾಗಿದೆ. ಸಿದ್ದಾಪುರ ರಸ್ತೆಯನ್ನೂ ಅಭಿವೃದ್ಧಿಗೊಳಿಸಲಾಗುವುದು. ಕಾಮಗಾರಿಯನ್ನು ಭೂ ಸೇನಾನಿಗಮದ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಎಲ್.ಎಂ.ಕೃಷ್ಣಮೂರ್ತಿ ಮಾತನಾಡಿ, ಬಹುದಿನಗಳ ಬೇಡಿಕೆಗೆ ಶಾಸಕರು ವಿಶೇಷ ಅನುದಾನ ನೀಡುವ ಮೂಲಕ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಸವಿತಾ, ಸದಸ್ಯ ನಂದೀಶ್ ಬಾಬು, ಕೆಆರ್‌ಐಡಿಎಲ್ ಇಂಜಿನೀಯರ್ ವಿ.ಎನ್.ಅಶ್ವಿನಿ, ಮುಕ್ತಿಯಾರ್, ಅರುಣ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net