

ಕಡೂರು: ಭೌಗೋಳಿಕವಾಗಿ ತನ್ನ ವಿಸ್ತೀರ್ಣ ಹೆಚ್ಚಿಸಿಕೊಳ್ಳುತ್ತಿರುವ ಪಟ್ಟಣದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಗೆ ಕಾಯಕಲ್ಪ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ವೆಂಕಟೇಶ್ವರ ನಗರದಲ್ಲಿ ಸೋಮವಾರ ದೊಂಬರಹಳ್ಳಿ ರಸ್ತೆ ಸಂಪರ್ಕದ ಡಾಂಬರೀಕರಣದ 1.34 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಪುರಸಭೆ ವ್ಯಾಪ್ತಿಯ ವೆಂಕಟೇಶ್ವರ ನಗರವು ತನ್ನ ವಿಸ್ತಾರ ಹೆಚ್ಚಿಸಿಕೊಂಡು ಹೊಸ ಬಡಾವಣೆಗಳ ಪ್ರದೇಶಗಳಲ್ಲಿ ನೂತನ ಮನೆಗಳು ನಿರ್ಮಾಣಗೊಂಡಿವೆ. ಪೂರಕವಾಗಿ ಇಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಪುರಸಭೆಯ ನಗರೋತ್ಥಾನದ ಅನುದಾನ ಒಳಗೊಂಡು ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ರಸ್ತೆ ಅಭಿವೃದ್ಧಿಪಡಿಸಲು ಅನುದಾನ ಒದಗಿಸಿಕೊಡಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯ ದೊಡ್ಡ ವಾರ್ಡ್ ಪ್ರದೇಶವಾಗಿ ಮಾರ್ಪಟ್ಟಿರುವ ವೆಂಕಟೇಶ್ವರ ನಗರದ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರ ಪರಿಶ್ರಮ ಹೆಚ್ಚಿನದಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಒತ್ತು ನೀಡಲಾಗಿದೆ. ಕಡೂರು ಪಟ್ಟಣದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಅಮೃತ್-2 ಯೋಜನೆಯಡಿ ಹೊಸ ಪೈಪ್‌ಲೈನ್ ಅಳವಡಿಕೆಗಾಗಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಭಾಗದ ನಿವಾಸಿಗಳ ಮೂಲ ಸಮಸ್ಯೆ ಅರಿತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ರಸ್ತೆ, ಚರಂಡಿ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಸ್ಥಳೀಯರಿಗೆ ಒದಗಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರಲಿದೆ ಎಂದರು.
ವೆಂಕಟೇಶ್ವರ ನಗರದಲ್ಲಿ ಸಾಕಷ್ಟು ಹೊಸ ಬಡಾವಣೆಗಳು ನಿರ್ಮಾಣಗೊಂಡಿದ್ದು ಅಗತ್ಯಕ್ಕೆ ಅನುಗುಣವಾಗಿ ಪುರಸಭೆ ಇತಿಮಿತಿಯಲ್ಲಿ ಹಾಗೂ ಜನಪ್ರತಿನಿಧಿಗಳ ಅನುದಾನ ಬಳಸಿಕೊಂಡು ಸವಲತ್ತು ಒದಗಿಸಲಾಗುವುದು. ಈ ಭಾಗದ ಮುಂದುವರಿದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆನಂದ್ ಅವರ ಕಾಳಜಿಯಿಂದ 1 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಪುರಸಭೆಯಿಂದ ಈ ಭಾಗದ ವಾರ್ಡ್ ನಿವಾಸಿಗರಿಗೆ ನೀರಿನ ಸಮಸ್ಯೆ ಆಗದಂತೆ ಜೆಪಿ ಲಾಡ್ಜ್ ಹಿಂಭಾಗದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಪುರಸಭಾ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಮುಖಂಡರಾದ ಸೊಪ್ಪು ಜಗದೀಶ್, ತಿಮ್ಮಯ್ಯ, ಅರೇಹಳ್ಳಿ ಮಲ್ಲಿಕಾರ್ಜುನ್, ಎನ್.ಎಚ್.ನಂಜುಂಡಸ್ವಾಮಿ, ರುದ್ರಯ್ಯ, ಸಂತೋಷ್, ವಸಂತ, ಪ್ರಸನ್ನ ಹಾಗೂ ಪುರಸಭಾ ಸಿಬ್ಬಂದಿ ಇದ್ದರು.