ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

10sp2
ಸೋಮವಾರಪೇಟೆ ತಾಲೂಕಿನ ಮಸಗೋಡು ಕಣಿವೆ ರಸ್ತೆ ಕಾಮಗಾರಿಗೆ ಅನುದಾನ ಕಲ್ಪಿಸುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ಅನುದಾನ ಕಲ್ಪಿಸುವ ಭರವಸೆ ನೀಡಿದರು.
Published on

ಸೋಮವಾರಪೇಟೆ: ರಸ್ತೆ ಅಭಿವೃದ್ಧಿಗೆ ಅನುದಾನ ಕೋರಿ ಪಟ್ಟಣದಲ್ಲಿ ಮಸಗೋಡು-ಕಣಿವೆ ರಸ್ತೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.


ಅಂಬೇಡ್ಕರ್ ವೃತ್ತದಿಂದ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು ಮೆರವಣಿಗೆಯಲ್ಲಿ ತೆರಳಿದರು. ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಗುಂಡಿಮಯ ರಸ್ತೆಯಲ್ಲಿ ಇತ್ತೀಚೆಗೆ ಗರ್ಭಿಣಿ ವಾಹನದಲ್ಲಿ ತೆರಳುವಾಗ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಎತ್ತಿನಗಾಡಿಯಲ್ಲಿ ಕಲ್ಪಿತ ಶವ ಇರಿಸಿ ಮೆರವಣಿಗೆ ಮುಂಭಾಗದಲ್ಲಿ ತರಲಾಯಿತು.


ಮಸಗೋಡು, ನೇರುಗಳಲೆ, ಅರೆಯೂರು, ಹೊಸಳ್ಳಿ, ನೇರಳೆ, ಮೋರಿಕಲ್ಲು, ಸೀಗೆಹೊಸೂರು, ಗಂಗಕಲ್ಯಾಣ, ಅಡಿಯನಾಡೂರು, ಯಲಕನೂರು, ಹಳೇ ಮದಲಪುರ, ಭುವನಗಿರಿ, ಜೇನುಕಲ್ಲುಬೆಟ್ಟ, ಕಣಿವೆ ಸೇರಿದಂತೆ ಇತರ ಗ್ರಾಮಗಳ ಜನರು ಒಂದೂವರೆ ಗಂಟೆಗಳ ಕಾಲ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.


ನಂತರ ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಅಷ್ಟೋತ್ತಿಗಾಗಲೆ, ಪೊಲೀಸರು ಭದ್ರತೆ ಹೆಚ್ಚಿಸಿದ್ದರು. ಕಚೇರಿ ಗೇಟ್ ಪಕ್ಕದಲ್ಲೇ ಬ್ಯಾರಿಗೇಡ್ ನಿರ್ಮಿಸಿದ್ದರು. ಕಚೇರಿ ಬಳಿ ಹೋಗದಂತೆ ತಡೆಯಲಾಯಿತು. ಮಹಿಳೆಯರು ಹಾಗೂ ವಿದ್ಯಾರ್ಥಿಗಳಿರುವುದರಿಂದ ಕಾಂಕ್ರೀಟ್ ನೆಲದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪೊಲೀಸರು ಒಪ್ಪದ ಕಾರಣ ಪ್ರತಿಭಟನಾಕಾರರು ಪರದಾಡಿದರು. ಮಳೆಯಲ್ಲಿ ಒದ್ದೆಯಾದ ಪ್ರಸಂಗವೂ ಎದುರಾಯಿತು.


ಬೇರೆ ಜಿಲ್ಲೆಗಳಲ್ಲಿ ಅಲ್ಲಿನ ಜನಪ್ರತಿನಿಧಿಗಳು ವಿಶೇಷ ಪ್ಯಾಕೇಜ್‌ನಲ್ಲಿ ರಸ್ತೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಕಳೆದ 20 ವರ್ಷಗಳಿಂದ ನಮ್ಮ ಭಾಗದ 18 ಕಿ.ಮೀ. ರಸ್ತೆಗೆ ಅನುದಾನ ಕಲ್ಪಿಸಿಲ್ಲ. ನಮ್ಮ ನತದೃಷ್ಟ ಗ್ರಾಮ ಇಡೀ ರಾಜ್ಯದಲ್ಲೇ ಇಲ್ಲ. ಒಂದು ಗ್ರಾಮೀಣ ರಸ್ತೆ ಮಾಡಲು ಎರಡು ದಶಕ ಬೇಕೆ. ಈಗ ಪ್ರತಿಭಟನೆ ಪ್ರಾರಂಭವಾದ ಮೇಲೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 15 ಕೋಟಿ ರೂ. ಬಿಡುಗಡೆ ಆಗಲಿದೆ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಬೋಜೇಗೌಡ ಕಿಡಿಕಾರಿದರು.
ಈ ಹೋರಾಟ ರಾಜಕೀಯ ರಹಿತವಾದುದು, ಹೋರಾಟದ ದಿಕ್ಕು ತಪ್ಪಿಸುವ ತಂತ್ರಗಳನ್ನು ಮಾಡುವ ಪ್ರಯತ್ನ ನಡೆದಿದೆ. ಈ ಬಾರಿ ಸೂಕ್ತ ಅನುದಾನ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ರಸ್ತೆ ಸಂಚಾರ ತಡೆ, ಪ್ರತಿಭಟನೆ, ವಿಧಾನಸೌಧ ಚಲೋ ಮಾಡಲಾಗುವುದು. ಹೈಕೋರ್ಟ್‌ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎನ್.ಅನಂತು ಎಚ್ಚರಿಸಿದರು.


ರಸ್ತೆ ಗುಂಡಿಮಯವಾಗಿರುವುದರಿಂದ ಏಳೆಂಟು ವರ್ಷಗಳಿಂದ ಬಸ್‌ಗಳು ರಸ್ತೆಯಲ್ಲಿ ಬರುತ್ತಿಲ್ಲ. 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲಾ ಕಾಲೇಜಿಗೆ ತೆರಳಲು ಕಷ್ಟವಾಗುತ್ತಿದೆ. ದಾರಿಯಲ್ಲಿ ಕಾಡಾನೆಗಳ ಕಾಟವಿದೆ. ಬಡವರು ಏನೂ ಮಾಡುವುದು. ಶಾಸಕರ ಮಕ್ಕಳು ನಡೆದುಕೊಂಡು ಕಾಲೇಜಿಗೆ ಹೋಗುತ್ತಾರೆಯೇ? ಬಾಡಿಗೆ ವಾಹನಗಳಿಗೆ ಹಣ ಕೊಡಲು ಸಾಧ್ಯವಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಾದ ಸಾರಿಕಾ ಮತ್ತು ನೇಹಾ ಆಕ್ರೋಶ ವ್ಯಕ್ತಪಡಿಸಿದರು.


ಎಇಇ ಮಹೇಂದ್ರ ಕುಮಾರ್ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಕಾರ್ಯಪಾಲಕ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ಮಧ್ಯಾಹ್ನದ ನಂತರ ಸ್ಥಳಕ್ಕೆ ಬಂದ ಇಇ ನಾಗರಾಜ್, ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿ, ಅನುದಾನ ಬಿಡುಗಡೆಗೆ ನವೆಂಬರ್ 30ರ ತನಕ ಸಮಯ ಕೇಳಿದರು.


ಕಲ್ಲುಕ್ವಾರಿಗಳಿಂದ ಭಾರಿ ತೂಕದ ಲಾರಿಗಳು ಸಂಚರಿಸುತ್ತಿವೆ. 6 ಚಕ್ರದ ಲಾರಿಗಳಿಗೆ 16 ಟನ್‌ಗಳಲ್ಲಿ ಜೆಲ್ಲಿ ಸಾಗಿಸಬೇಕು. ಆದರೆ 21 ಟನ್‌ನಷ್ಟು ಸಾಗಿಸಲಾಗುತ್ತಿದೆ. ಈ ಕಾರಣದಿಂದ ರಸ್ತೆ ಗುಂಡಿಮಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಬೇಡಿಕೆಗಳ ಈಡೇರಿಕೆಯ ಭರವಸೆಯ ನಂತರ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.


ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ.ಪುಷ್ಪ, ಅರೇಯೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಪಿ.ಸುರೇಶ, ಕಾಟೀಕೊಪ್ಪ ಗ್ರಾಮದ ಅಧ್ಯಕ್ಷ ವಿ.ಪಿ.ಕುಮಾರ್, ಮೋರಿಕಲ್ಲು ಗ್ರಾಮದ ಅಧ್ಯಕ್ಷ ಅಜಿತ್, ಅಡಿನಾಡೂರು ಅಧ್ಯಕ್ಷ ಕಾಂತ, ಸಿಗೇಹೊಸೂರು ಅಧ್ಯಕ್ಷ ಸುರೇಶ್, ಭುವನಗಿರಿ ಗ್ರಾಮ ಅಧ್ಯಕ್ಷ ಚಂದ್ರ, ನೇರಳೆ ಅಧ್ಯಕ್ಷ ಉಲ್ಲಾಸ, ಕೂಡಿಗೆ ಗ್ರಾಪಂ ಸದಸ್ಯ ಹಮೀದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net