ರಸ್ತೆ ಅಭಿವೃದ್ಧಿಗೆ ಅಂಗಡಿಗಳ ತೆರವು ಕಾರ್ಯ ಆರಂಭ

07 HANUR 2
ಹನೂರಿನಲ್ಲಿ ಅಂಗಡಿ- ಮುಂಗಟ್ಟು ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವುದು.
Published on

ಹನೂರು: ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧ ನನೆಗುದಿಗೆ ಬಿದ್ದಿದ್ದ ಪಟ್ಟಣದ ಅಂಗಡಿ, ಮುಂಗಟ್ಟು ಕಟ್ಟಡಗಳ ತೆರವು ಕಾರ್ಯವನ್ನು ಶುಕ್ರವಾರದಿಂದ ಪ್ರಾರಂಭಿಸಲಾಯಿತು.

ಕೆ-ಶಿಪ್ ಯೋಜನೆಯಡಿ 108 ಕೋಟಿ ರೂ. ವೆಚ್ಚದಲ್ಲಿ ಕೊಳ್ಳೇಗಾಲದಿಂದ ಹನೂರಿನವರೆಗೆ 23 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 2 ವರ್ಷಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಕಾಮಗಾರಿ ಪ್ರಾರಂಭಗೊಂಡು ಮಧುವನಹಳ್ಳಿಯಿಂದ ಹನೂರಿನವರೆಗೆ ರಸ್ತೆ ನಿರ್ಮಿಸಲಾಗಿತ್ತು.

ಜತೆಗೆ ಕಾಮಗೆರೆ, ಮಂಗಲ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಹನೂರು ಪಟ್ಟಣದ ಕೇಂದ್ರ ಭಾಗದಲ್ಲಿರುವ ಕಟ್ಟಡಗಳನ್ನು (ವಾಣಿಜ್ಯ ಕಟ್ಟಡ) ತೆರವುಗೊಳಿಸಲು ಕೆಲವು ಕಾನೂನಾತ್ಮಕ ತೊಡಕುಗಳಿದ್ದವು. ಹಾಗಾಗಿ ಕಟ್ಟಡಗಳನ್ನು ತೆರವುಗೊಳಿಸಿರಲಿಲ್ಲ. ಇದರಿಂದ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿತ್ತು. ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿತ್ತು. ಪರಿಣಾಮ ಸಾರ್ವಜನಿಕರು ಸಂಚರಿಸಲು ತುಂಬ ತೊಂದರೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದಾಗ್ಯೂ ಕಾಮಗಾರಿ ಕುಂಟುತ್ತ ಸಾಗಿತ್ತು.

ಈ ದಿಸೆಯಲ್ಲಿ ಕಳೆದ ತಿಂಗಳು ನಡೆದ ಸಭೆಯಲ್ಲಿ ಸಚಿವ ವಿ.ಸೋಮಣ್ಣ ಅವರು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆ-ಶಿಪ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರಲ್ಲದೆ ಜಿಲ್ಲಾಧಿಕಾರಿ ಅವರಿಗೆ ಅಗತ್ಯ ಕ್ರಮವಹಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 10 ದಿನಗಳ ಹಿಂದೆ ಉಪವಿಭಾಗಾಧಿಕಾರಿ ಗೀತಾ ಹುಡೇದ್ ಹಾಗೂ ತಹಸೀಲ್ದಾರ್ ಆನಂದಯ್ಯ ಅವರು ಅಂಗಡಿಗಳನ್ನು ಖಾಲಿ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದರಲ್ಲದೆ ಪಟ್ಟಣ ಪಂಚಾಯಿತಿ ವತಿಯಿಂದಲೂ ನೋಟಿಸ್ ಸಹ ನೀಡಲಾಗಿತ್ತು. ಇದೀಗ ಕಟ್ಟಡಗಳ ತೆರವು ಕಾರ್ಯವನ್ನು ಕೆ-ಶಿಪ್ ಅಧಿಕಾರಿಗಳು ಶುಕ್ರವಾರದಿಂದ ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net