ರಸ್ತೆ ಅಭಿವೃದ್ಧಿ ಕಾಮಗಾರಿಗಿಲ್ಲ ವೇಗ, ಹಳ್ಳಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿ

21KNDPH1
Published on

ಕುಂದಾಣ: ಕುಂದಾಣದಿಂದ ಗಂಟಿಗಾನಹಳ್ಳಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತ ಸಾಗಿದ್ದು, ಹಳ್ಳಬಿದ್ದ ರಸ್ತೆಯಲ್ಲಿನ ಸಂಚಾರ ವಾಹನ ಸವಾರರನ್ನು ಹೈರಾಣಾಗಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಬೀರಸಂದ್ರದ ಚಪ್ಪರಕಲ್ಲು ಮಾರ್ಗವಾಗಿ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 13.5ಕಿಮೀ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ 2020ರ ಜೂನ್ 19ರಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಭಿವೃದ್ಧಿಗಾಗಿ ಅಲ್ಲಲ್ಲಿ ಅಗೆದು ಮಣ್ಣಿನ ರಾಶಿ ಹಾಕಿರುವುದರಿಂದ ವಾಹನ ಸಂಚಾರಕ್ಕೆ ಭಾರಿ ತೊಡಕುಂಟಾಗಿದೆ.

21 ಕೋಟಿ ರೂ.ವೆಚ್ಚದಲ್ಲಿ ಈ ರಸ್ತೆ ವಿಸ್ತರಣೆ ಕಾಮಗಾರಿ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷ ಉರುಳಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದ್ದ ರಸ್ತೆಯನ್ನೇ ಅಗೆದು ಗುಂಡಿಯಂತೆ ಮಾಡಿದ್ದು, ಇದರಿಂದಾಗಿ ಒಂದಲ್ಲಾ ಒಂದು ವಾಹನ ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ.

ರಸ್ತೆಯಲ್ಲಿ ಹಳ್ಳ-ದಿಣ್ಣೆ ನಿರ್ಮಾಣವಾಗಿರುವುದರಿಂದ ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳು ಆವೃತವಾಗುತ್ತಿರುವುದರಿಂದ ವಾಹನ ಸವಾರರ ಜತೆಗೆ ಸ್ಥಳೀಯರು ಹೈರಾಣಾಗುವಂತಾಗಿದೆ.

ಅವೈಜ್ಞಾನಿಕ ಕಾಮಗಾರಿ: ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ಮಾರ್ಗ ಹಾದುಹೋಗಿದೆ. ಕಂಬ ತೆರವುಗೊಳಿಸುವ ಮೂಲ ಯೋಜನೆಗೆ ಕತ್ತರಿ ಹಾಕಲಾಗಿದೆ. ಸ್ಥಳಾಂತರಕ್ಕಾಗಿ ಬೆಸ್ಕಾಂ 6 ಕೋಟಿ ರೂ. ವೆಚ್ಚ ಭರಿಸುವಂತೆ ಪಟ್ಟು ಹಿಡಿದ ಪರಿಣಾಮ ಅಷ್ಟೊಂದು ಮೊತ್ತ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಸ್ತೆಯ ವಿಸ್ತೀರ್ಣ ಪ್ರಮಾಣವನ್ನೇ ಕಡಿತಗೊಳಿಸಲಾಗಿದೆ. ಮೂಲ ಯೋಜನೆ ಪ್ರಕಾರ 10 ಮೀಟರ್ ವಿಸ್ತೀರ್ಣದ ದ್ವಿಮುಖ ರಸ್ತೆ ನಿರ್ಮಾಣಗೊಳ್ಳಬೇಕಿತ್ತು. ಆದರೆ ಲೋಕೋಪಯೋಗಿ ಇಲಾಖೆ ಯೋಜನೆಯನ್ನು ಬದಲಿಸಿ, 7 ಮೀಟರ್ ವಿಸ್ತೀರ್ಣದ ತಾತ್ಕಾಲಿಕ ದ್ವಿಮುಖ ರಸ್ತೆಯಾಗಿ ಪರಿವರ್ತಿಸಿ ಯೋಜನೆಯ ಉದ್ದೇಶವನ್ನೇ ಮಣ್ಣುಪಾಲು ಮಾಡಿದೆ. ಇದರಿಂದ ವಿದ್ಯುತ್ ಕಂಬಗಳು ರಸ್ತೆಯಲ್ಲೇ ನೆಟ್ಟಂತಾಗಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಕಾಮಗಾರಿಯೇ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಜಲ್ಲಿ ತಯಾರಿಸುವ ಬಂಡೆಗಳಲ್ಲಿ ನೀರು ತುಂಬಿಕೊಂಡು ಕಾಮಗಾರಿಗೆ ಅಗತ್ಯವಾದ ಜಲ್ಲಿ ಸರಬರಾಜಿನಲ್ಲಿ ಅಡಚಣೆಯಾಗಿದ್ದರಿಂದ ತಾತ್ಕಾಲಿಕವಾಗಿ ಕೆಲಸ ಸ್ಥಗಿತವಾಗಿದೆ. ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. 2022ರ ೆಬ್ರವರಿ ಅಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕೃಷ್ಣಪ್ಪ, ಪಿಡಬ್ಲ್ಯುಡಿ ಇಂಜಿನಿಯರ್, ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net