

ಯಳಂದೂರು: ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 209ರ ಸುವರ್ಣ ತಿರುಮಲ ಶ್ರೀನಿವಾಸ ದೇಗುಲದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್.ಮಹೇಶ್ ಬುಧವಾರ ಭೂಮಿಪೂಜೆ ನೆರವೇರಿಸಿದರು.
ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯಿತಿಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 1.23 ಕೋಟಿ ರೂ. ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಒಟ್ಟು 3 ವಾರ್ಡ್‌ನಲ್ಲಿ 980 ಮೀಟರ್ ರಸ್ತೆ ಅಭಿವೃದ್ಧಿಗೆ 49.65 ಲಕ್ಷ ರೂ. ವ್ಯಯಿಸಲಾಗುವುದು. ಇದೀಗ ವಿಧ್ಯುಕ್ತವಾಗಿ ಒಂದು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 2 ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಭೂಮಿಪೂಜೆ ನೆರವೇರಿಸಲು ಕ್ರಮ ವಹಿಸಲಾಗುವುದು ಎಂದು ಮಹೇಶ್ ಹೇಳಿದರು.
ಸುವರ್ಣ ತಿರುಮಲ ದೇಗುಲದ ಮುಂಭಾಗ ನೀರಿನ ತೊಂಬೆ ನಿರ್ಮಿಸಲು ಹಾಗೂ ಈ ರಸ್ತೆಯಲ್ಲಿ ಕಲ್ಲಿನ ಬೆಂಚ್‌ಗಳನ್ನು ಹಾಕಿಸಲು ಪಪಂ ಸಭೆಯಲ್ಲಿ ನಿರ್ಣಯಿಸಿ ಕ್ರಮ ವಹಿಸುವಂತೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಡಿವೈಡರ್‌ನಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಇಲ್ಲಿರುವ ಅಂಗಡಿ ಮಳಿಗೆ ಇನ್ನೂ ತೆರವುಗೊಂಡಿಲ್ಲ. ಹಾಗಾಗಿ ಈ ಬಗ್ಗೆ ಕ್ರಮ ವಹಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಬೇಕೆಂದು ಸೂಚನೆ ನೀಡಿದರು.
ಸದಸ್ಯರು ಗೈರು: ಅಧ್ಯಕ್ಷೆ ಪ್ರಭಾವತಿ, ಬಿಜೆಪಿ ಸದಸ್ಯೆ ಸವಿತಾ, ನಾಮನಿರ್ದೇಶಿತ ಸದಸ್ಯರು ಹೊರತುಪಡಿಸಿ ಉಳಿದ 9 ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.
ಪಪಂ ಮುಖ್ಯಾಧಿಕಾರಿ ಪ್ರಭಾವತಿ ರಾಜಶೇಖರ್ ಸದಸ್ಯೆ ಸವಿತಾ ಬಸವರಾಜು ಮಾಜಿ ಸದಸ್ಯ ವೈ.ಎಂ. ಮುರುಳಿಕೃಷ್ಣ, ನಾಮ ನಿರ್ದೇಶಿತ ಸದಸ್ಯರಾದ ಮಹೇಶ್, ರಘು, ನಿಂಗರಾಜು ಮುಖ್ಯಾಧಿಕಾರಿ ಮಲ್ಲೇಶ್, ಜೆಇ ನಾಗೇಂದ್ರ, ಮುಖಂಡರಾದ ಮಹೇಶ್, ಚಂದ್ರಶೇಖರ್, ಕಿಟ್ಟಿ ಹಾಜರಿದ್ದರು.