ರಸ್ತೆ ಅಪಘಾತ: ವರ್ಷಾಚರಣೆಗೆ ಬಂದಿದ್ದ ತೆಲಂಗಾಣದ  ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವು

Lorry Accident
Published on

ಮೈಸೂರು: ವರ್ಷಾಚರಣೆಗೆ ಬಂದಿದ್ದ ತೆಲಂಗಾಣ ಮೂಲದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ನಗರದ ಗನ್‌ಹೌಸ್ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ. ತೆಲಂಗಾಣ ಮೂಲದ ಸಾಯಿಕೃಷ್ಣ(30) ಹಾಗೂ ಸಂದೀಪ್(31) ಮೃತರು. ಗಾಯಗೊಂಡಿರುವ ಜಗದೀಶ್ ಹಾಗೂ ಚಾಲಕ ಹರಿಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಾಲ್ವರು ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ. ಹೊಸ ವರ್ಷಾಚರಣೆಗಾಗಿ ಅವರು ಬಂಡೀಪುರಕ್ಕೆ ಹೋಗುವ ಸಲುವಾಗಿ ಮೈಸೂರಿಗೆ ಆಗಮಿಸಿದ್ದರು.

ಭಾನುವಾರ ಮಧ್ಯರಾತ್ರಿ 1.30ರಲ್ಲಿ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಮರಾಜ ಜೋಡಿ ರಸ್ತೆಯ ಬಸವೇಶ್ವರ ವೃತ್ತದ ಬಳಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net