

ಹೊಳೆಆಲೂರ: ಗ್ರಾಮದ ಮಲಪ್ರಭಾ ಸೇತುವೆ ಹತ್ತಿರ ಬಾದಾಮಿ- ಹೊಳೆಆಲೂರ ಸಂರ್ಪಕಿಸುವ ರಸ್ತೆ, ಪವಾರ್ ಪೆಟ್ರೋಲ್ ಪಂಪ್ ಹತ್ತಿರದ ಹೊಳೆಆಲೂರ- ಕೊಣ್ಣೂರ ಸಂರ್ಪಸುವ ರಸ್ತೆ ಅಗೆದು ಮುಳ್ಳಿನ ಕಂಟಿ ಹಚ್ಚಿ ಯಾವುದೇ ವಾಹನ ಗಳು ಗ್ರಾಮ ಪ್ರವೇಶಿಸದಂತೆ ಹಾಗೂ ಹೊರಹೋಗದಂತೆ ಗ್ರಾಪಂ ನವರು ವ್ಯವಸ್ಥೆ ಮಾಡಿದ್ದಾರೆ.
ಹುನಗುಂಡಿ ಗ್ರಾಮಸ್ಥರು ಗ್ರಾಮದ ಸುತ್ತಲಿನ ಸಂಪರ್ಕವನ್ನು ತಡೆಯಲು ರಸ್ತೆಗಳಿಗೆ ಮುಳ್ಳಿನ ಕಂಟಿ ಹಾಕಿದ್ದಾರೆ. ಕುರುವಿನಕೊಪ್ಪದ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಸ್ಥಳೀಯ ಗ್ರಾಪಂ ನೇತೃತ್ವದಲ್ಲಿ ಪ್ರತಿ ವಾರ್ಡಿಗೆ ತರಕಾರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಗ್ರಾಪಂ, ರೈಲ್ವೆ ಸ್ಟೇಷನ್, ಆಲೂರ ವೆಂಕಟರಾಯ ಭವನದ ಹತ್ತಿರ ಬೆಳಗ್ಗೆ 7ರಿಂದ 10ರವರೆಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು, ಬೆಂಗಳೂರು, ಗೋವಾಗಳಿಗೆ ದುಡಿಯಲು ಹೋಗಿದ್ದ ಜನರು ಗ್ರಾಮಕ್ಕೆ ಆಗಮಿಸುತ್ತಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಗಾ›ಪಂನಿಂದ ಡಂಗುರ ಸಾರಿ ಗ್ರಾಮಕ್ಕೆ ಬೇರೆ ಊರಿನಿಂದ ಬಂದ ಜನರ ಬಗ್ಗೆ ಹೊಸಬರ ಬಗ್ಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ಗ್ರಾಮದ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬುಧವಾರ ರಾತ್ರಿ ಮತ್ತು ಗುರುವಾರ ಮಧ್ಯಾಹ್ನ ಲಾಠಿ ಬೀಸಿ ಓಡಿಸಿದ್ದಾರೆ. ಜನಸಾಮಾನ್ಯರಿಗೆ ಅಗತ್ಯ ಮೂಲಸೌಲಭ್ಯಗಳಾದ ದಿನಸಿ ಹಾಗೂ ತರಕಾರಿ ಕೊರತೆಯಾಗದಂತೆ ಗದಗ ಹಾಗೂ ಬದಾಮಿಯಿಂದ ತರಿಸಿಕೊಳ್ಳಲು ಗ್ರಾಪಂನಿಂದ ಅಧಿಕೃತ ಪಾಸ್ ಪಡೆದು ಸಂಚರಿಸಲು ಕೆಲ ಗೂಡ್ಸ್ ಗಾಡಿಗಳಿಗೆ ಅನುಮತಿ ನೀಡಲಾಗಿದೆ. ಹೊಳೆಆಲೂರ, ಹುನಗುಂಡಿ, ಕುರುವಿನಕೊಪ್ಪ, ಅಮರಗೋಳ, ಮೆಣಸಗಿ, ಗಾಡಗೋಳಿ, ಹೊಳೆಮಣ್ಣೂರ. ಬೆನಹಾಳ ಸೇರಿ ಎಲ್ಲ ಗ್ರಾಮಗಳ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ದಿಗ್ಬಂಧನ ಹಾಕಿಕೊಳ್ಳುತ್ತಿದ್ದಾರೆ.