

ಕೊಟ್ಟೂರು: ಪಟ್ಟಣದ ಸುತ್ತಮುತ್ತ ಗುಣಮಟ್ಟದ ಮಣ್ಣಿದ್ದು ಎಲ್ಲ ರೀತಿಯ ಬೆಳೆ ಬೆಳೆಯಬಹುದಾಗಿದ್ದು, ಸಾವಯವ ಕೃಷಿಗೆ ಹೇಳಿ ಮಾಡಿಸಿದಂತಹ ಭೂಮಿ ಇದು ಎಂದು ರೈತ ಸೋಮನಾಥ ರಡ್ಡಿ ಪೂರ್ಮ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಇತರ ಸಂಸ್ಥೆಗಳೊಂದಿಗೆ ಆಯೋಜಿಸಿದ್ದ ಜವಾರಿ ಬಿತ್ತನೆ ಬೀಜ ಮೇಳಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಅಧಿಕ ಇಳುವರಿ ಆಸೆಯಿಂದ ದೇಸಿ ಬಿತ್ತನೆ ಬೀಜವನ್ನು ಬಿಟ್ಟು, ಹೈಬ್ರಿಡ್ ಬೀಜ ಬಿತ್ತನೆ ಮಾಡಲಾಗುತ್ತಿದೆ. ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಿದ ಪರಿಣಾಮ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಈಗಿನ ಆಹಾರ ಸೇವಿಸಿ ಜನರು ಕೂಡಾ ರೋಗಗ್ರಸ್ತರಾಗುತ್ತಿದ್ದಾರೆ ಎಂದರು.
ಮರ ಬೇಸಾಯ ತಜ್ಞ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಬಿತ್ತನೆ ಮಾಡಿದ ಬೆಳೆ ಆರು ತಿಂಗಳಲ್ಲಿ ನಿಮಗೆ ಆದಾಯ ತಂದುಕೊಡುತ್ತದೆ. ಆದರೆ ಮರ, ಗಿಡ, ಬಳ್ಳಿ ಬೇಸಾಯ ವರ್ಷಪೂರ್ತಿ ಆದಾಯ ನೀಡುತ್ತವೆ. ಮೊದಲು ಕೃಷಿ ಶ್ರೇಷ್ಠ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠವೆಂಬ ಕಾಲವಿತ್ತು. ಈಗ ಇದು ಸಂಪೂರ್ಣ ಉಲ್ಟಾ ಆಗಿದೆ. ಒಂದು ಎಕರೆಯಲ್ಲಿ ಬೇಲ್ದಣ್ಣು ಬೆಳೆಸಿದರೆ, ಒಂದು ಎಕರೆ ಅಡಕೆ ಬೆಳೆಯ ಆದಾಯಕ್ಕಿಂತಲೂ ಹೆಚ್ಚು ಲಾಭ ತಂದುಕೊಡಬಲ್ಲದು ಎಂದರು. ಪರಿಸರ ಪ್ರೇಮಿ ಮಲ್ಲಿಕಾರ್ಜುನ, ವಿ.ಗಾಯತ್ರಿ, ರೈತ ಸಿದ್ದಲಿಂಗಪ್ಪ ಇತರರಿದ್ದರು.
ರೈತರಿಂದ ಉತ್ತಮ ಸ್ಪಂದನೆ: ಜೋಳ, ರಾಗಿ, ನವಣೆ, ಗುರೆಳ್ಳು, ಅಲಸಂದೆ, ಸಜ್ಜೆ, ವಿವಿಧ ತರಕಾರಿ ಬಿತ್ತನೆ ಬೀಜಗಳನ್ನು ರೈತರು ಮಾರಾಟಕ್ಕೆ ತಂದಿದ್ದರು.