

ಮುಂಡರಗಿ: ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಯೂರಿಯಾ ರಸಗೊಬ್ಬರ ಕೊರತೆಯಾಗಿದ್ದು, ಗೊಬ್ಬರ ಖರೀದಿಗಾಗಿ ರೈತರು ಮಳಿಗೆಗೆ ಮುಗಿಬೀಳುವಂತಹ ಸನ್ನಿವೇಶಗಳು ಕಂಡುಬರುತ್ತಿವೆ.
ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಸಮರ್ಪಕ ಯೂರಿಯಾ ರಸಗೊಬ್ಬರ ಪೂರೈಕೆಯಾಗದ ಕಾರಣ ಗೊಬ್ಬರ ಖರೀದಿಗಾಗಿ ರೈತರು ಕಾಯುತ್ತಿದ್ದರು. ಸ್ಥಳೀಯ ಮುಖ್ಯ ಬಜಾರನಲ್ಲಿರುವ ಗೊಬ್ಬರ ಮಾರಾಟ ಮಳಿಗೆಗೆ ಬುಧವಾರ ಯೂರಿಯಾ ಬರುತ್ತಿದ್ದಂತೆಯೇ ಪಟ್ಟಣ ಸೇರಿ ತಾಲೂಕಿನ ಬೂದಿಹಾಳ, ಹೆಸರೂರ, ಕಕ್ಕೂರು, ಬೆಣ್ಣಿಹಳ್ಳಿ, ಮಕ್ತುಂಪುರ, ಬಸಾಪುರ ಮೊದಲಾದ ಗ್ರಾಮಗಳ ರೈತರು ಅಂಗಡಿಗಳಿಗೆ ಮುಗಿಬಿದ್ದು ಖರೀದಿಸಿದರು.
ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಗೋವಿನಜೋಳ, ಹತ್ತಿ, ಭತ್ತ ಮೊದಲಾದ ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ಅವಶ್ಯಕತೆಯಿದೆ. ಒಂದು ಅಂಗಡಿಗೆ 200ರಿಂದ 300 ಚೀಲಗಳು ಯೂರಿಯಾ ಗೊಬ್ಬರ ಬರುತ್ತಿದೆ. ಪ್ರತಿ ರೈತರಿಗೆ 2ರಿಂದ 3 ಚೀಲಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಸರ್ಕಾರ ಯೂರಿಯಾ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಸಮರ್ಪಕ ಯೂರಿಯಾ ಪೂರೈಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಆಗ್ರಹಿಸಿದರು.
ನೂಕುನುಗ್ಗಲು: ಯೂರಿಯಾ ಗೊಬ್ಬರ ಖರೀದಿಗಾಗಿ ರೈತರು ಗೊಬ್ಬರ ಅಂಗಡಿಗಳ ಮುಂದೆ ಮುಗಿಬಿದ್ದ ದೃಶ್ಯ ನರೇಗಲ್ಲನಲ್ಲಿ ಬುಧವಾರ ಕಂಡುಬಂತು.
ಸ್ಥಳೀಯ ಗದಗ-ಗಜೇಂದ್ರಗಡ ಮುಖ್ಯ ರಸ್ತೆ ಪಕ್ಕದ ಖಾಸಗಿ ಬೀಜ, ಗೊಬ್ಬರ ಅಂಗಡಿಗಳ ಮುಂದೆ ರೈತರು ಯೂರಿಯಾ ಗೊಬ್ಬರ ಪಡೆಯಲು ಪರಸ್ಪರ ಅಂತರ ಮರೆತು ಮುಗಿಬಿದ್ದರು. ನೂಕುನುಗ್ಗಲು ಉಂಟಾಗಿದ್ದರಿಂದ ಜನರನ್ನು ನಿಯಂತ್ರಿಸಲು ಅಂಗಡಿ ಮಾಲೀಕರು, ಪೊಲೀಸರು ಹರಸಾಹಸಪಟ್ಟರು.
ಬೇಡಿಕೆಗೆ ತಕ್ಕಷ್ಟು ಗೊಬ್ಬರ ಬಂದಿಲ್ಲ. ಹೀಗಾಗಿ ಗೊಬ್ಬರ ಖರೀದಿಗೆ ರೈತರು ಮುಗಿಬಿದ್ದರು. ಆದರೆ, ಅಂಗಡಿಯವರು ಒಬ್ಬ ರೈತರಿಗೆ ಒಂದು ಚೀಲ ನೀಡುತ್ತಿದ್ದಾರೆ. ಆಗ ರೈತರು ಅಂಗಡಿಗಳ ಮಾಲೀಕರೊಂದಿಗೆ ವಾಗ್ವಾದ ನಡೆಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡತಡೆಯಾಗಿತ್ತು.
ಮುಂಡರಗಿಗೆ ಬುಧವಾರ 13 ಟನ್ ಯೂರಿಯಾ ರಸಗೊಬ್ಬರ ಬಂದಿದೆ. ಹಾಗೆಯೇ ಕೊರ್ಲಹಳ್ಳಿ ಗ್ರಾಮಕ್ಕೆ 40 ಟನ್ ಸೇರಿ ಒಟ್ಟು 53 ಟನ್ ಯೂರಿಯಾ ಬಂದಿದೆ. ಇನ್ನೂ 50 ಟನ್ ಯೂರಿಯಾ ಪೂರೈಸುವಂತೆ ಈಗಾಗಲೇ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಸಮರ್ಪಕ ಯೂರಿಯಾ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.| ರವಿಕುಮಾರ ಹಾವನೂರ, ಕೃಷಿ ಅಧಿಕಾರಿ, ಮುಂಡರಗಿ
ಎರಡು ತಿಂಗಳಿಂದ ನಮ್ಮ ಅಂಗಡಿಗೆ ಯೂರಿಯಾ ರಸಗೊಬ್ಬರ ಪೂರೈಕೆಯಾಗಿಲ್ಲ. ಹಾಗಾಗಿ ರೈತರಿಗೆ ಗೊಬ್ಬರವ್ನನು ನೀಡಲಾಗುತ್ತಿಲ್ಲ. ಅಂಗಡಿಗೆ ಬಂದ ಒಂದು ಲೋಡ್ ಯೂರಿಯಾ ಗೊಬ್ಬರದಲ್ಲಿ ಪ್ರತಿ ರೈತರ ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ಪಡೆದು ಒಬ್ಬರಿಗೆ ಒಂದು ಚೀಲ ಗೊಬ್ಬರ ವಿತರಿಸಲಾಗುತ್ತಿದೆ.| ಆನಂದ ಹುಯಿಲಗೋಳಮಠ ಬೀಜ, ಗೊಬ್ಬರ ಅಂಗಡಿ ಮಾಲೀಕ, ನರೇಗಲ್ಲ