

ಚಿಕ್ಕಬಳ್ಳಾಪುರ: ಅಕ್ರಮವಾಗಿ ದುಬಾರಿ ದರಕ್ಕೆ ಮಾರಾಟ ಮತ್ತು ಕೃತಕ ಅಭಾವದ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು, ನಿಯಮ ಉಲ್ಲಂಘಿಸುವ ರಸಗೊಬ್ಬರ ಮಾರಾಟ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರು, ರಸಗೊಬ್ಬರ ತಯಾರಿಕಾ ಪ್ರತಿನಿಧಿಗಳು ಹಾಗೂ ರೈತ ಮುಖಂಡರನ್ನೊಳಗೊಂಡ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.
ರಸಗೊಬ್ಬರ ದಾಸ್ತಾನು ಮಳಿಗೆಗಳಲ್ಲಿ ಲಭ್ಯವಿದ್ದರೂ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದರ ಬಗ್ಗೆ ವ್ಯಾಪಕವಾಗಿ ದೂರು ಕೇಳಿ ಬರುತ್ತಿದೆ. ಇದಕ್ಕೆ ಅವಕಾಶ ನೀಡದೇ ರೈತರಿಗೆ ಸಮರ್ಪಕವಾಗಿ ಮಾರಬೇಕು. ಇಲ್ಲದಿದ್ದಲ್ಲಿ ರಸಗೊಬ್ಬರ ಮಾರಾಟ ಅಂಗಡಿ ಮಾಲೀಕರು ಮತ್ತು ಏಜೆನ್ಸಿಗಳು ನಿರ್ದಾಕ್ಷ್ಯಣ್ಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಗದಿತ ದರಕ್ಕಿಂತ ಅಧಿಕ ದರದಲ್ಲಿ ಗೊಬ್ಬರ ಮಾರಿ ರೈತರಿಗೆ ವಂಚಿಸುವ ಮಾರುಕಟ್ಟೆ ತಂತ್ರ ಒಳ್ಳೆಯದಲ್ಲ. ಈಗಲಾದರೂ ಜಿಲ್ಲಾದ್ಯಂತ ಪರವಾನಗಿ ಪಡೆದು ವಹಿವಾಟು ನಡೆಸುತ್ತಿರುವ ಅಂಗಡಿ ಮಾಲೀಕರು ನಿಯಮಾನುಸಾರ ವಹಿವಾಟು ನಡೆಸಬೇಕು. ಕಡ್ಡಾಯವಾಗಿ ರಸಗೊಬ್ಬರ ಅಂಗಡಿಗಳ ಮುಂದೆ ಆಯಾ ದಿನದ ದಾಸ್ತಾನು ವಿವರ ಹಾಗೂ ದರದ ಮಾಹಿತಿಯ ಅಳವಡಿಸಬೇಕು ಎಂದರು.
ಜಿಲ್ಲೆಯಲ್ಲಿ ರಸಗೊಬ್ಬರದ ದಾಸ್ತಾನಿನ ಕೊರತೆ ಇಲ್ಲ. ಕಾಲ ಕಾಲಕ್ಕೆ ಅಗತ್ಯ ಪೂರೈಕೆ, ಮಾರಾಟ, ಬೇಡಿಕೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪಾ, ಕೃಷಿ ಉಪ ನಿರ್ದೇಶಕರಾದ ಚಂದ್ರಕುಮಾರ್, ಅನುರೂಪ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ರಮೇಶ್, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಮಂಜುನಾಥ್, ಶಿವಣ್ಣ, ಕೃಷಿ ಬೆಳೆ ವಿಮೆ ಜಿಲ್ಲಾ ಪ್ರತಿನಿಧಿ ಪ್ರವೀಣ್ ಮತ್ತಿತರರು ಇದ್ದರು.
ರೈತರ ದೂರುಗಳ ಸುರಿಮಳೆ: ಜಿಲ್ಲೆಯಲ್ಲಿ ಕೃತಕ ಅಭಾವ ಮತ್ತು ದುಬಾರಿ ದರ ಮಾರಾಟದ ಬಗ್ಗೆ ರೈತಪರ ವಿವಿಧ ಸಂಘಟನೆಗಳ ಮುಖಂಡರು ದೂರಿನ ಸುರಿಮಳೆಗೈದರು. ಮುಂಗಾರು ಅವಧಿಯ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಡಿಎಪಿ ಗೊಬ್ಬರ ಸಿಗುತ್ತಿಲ್ಲ. ಪ್ರಭಾವಿಗಳಿಗೆ ಮಾತ್ರ ಕಳ್ಳ ಮಾರ್ಗದಲ್ಲಿ ಪೂರೈಸಲಾಗುತ್ತಿದೆ. ಯಾವುದೇ ರಸಗೊಬ್ಬರ ಅಂಗಡಿ ಎದುರು ದರಪಟ್ಟಿಯನ್ನು ಪ್ರಕಟಿಸುತ್ತಿಲ್ಲ. ಖರೀದಿಗೆ ಅಧಿಕೃತ ರಸೀದಿ ನೀಡುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಮುಂಬರುವ ದಿನಗಳಲ್ಲಿ ದೂರಿಗೆ ಆಸ್ಪದ ನೀಡುವ ರಸಗೊಬ್ಬರ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಬೆಳ್ಳೂಟಿ ಮುನಿಕೆಂಪಣ್ಣ, ಕದಿರೇಗೌಡ, ಲೋಕೇಶ್, ಬಿ.ಎಚ್.ನರಸಿಂಹಯ್ಯ, ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ಶಿವಾನಂದರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಚರ್ಚೆ ಬೇಡ: ರಸಗೊಬ್ಬರ ಸಮಸ್ಯೆ ಮತ್ತು ಬೆಳೆ ವಿಮೆ ವಿಚಾರವಾಗಿ ಮಾತ್ರ ಸಭೆಯಲ್ಲಿ ಪ್ರಸ್ತಾಪಿಸಲು, ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತೊಂದು ಸಭೆಯಲ್ಲಿ ಚರ್ಚಿಸಲು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮನವಿ ಮಾಡಿದರು. ಬೆಳೆ ನಷ್ಟ, ಪರಿಹಾರ, ದುಬಾರಿ ದರ ಸೇರಿ ನಾನಾ ವಿಷಯಗಳ ಬಗ್ಗೆ ಚರ್ಚಿಸಲು ರೈತ ಸಂಘಟನೆಗಳು ಬಯಸಿದ್ದವು. ಆದರೆ, ಗೊಬ್ಬರ ಅಂಗಡಿ ಮಾಲೀಕರು ಮತ್ತು ಬೆಳೆ ವಿಮೆ ಅಧಿಕಾರಿಗಳು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಎರಡು ವಿಷಯಗಳಿಗೆ ಮಾತ್ರ ಆದ್ಯತೆ ನೀಡಲಾಗಿತ್ತು. ಆದಷ್ಟು ಬೇಗ ಕೃಷಿ ಇಲಾಖೆಯ ಕಚೇರಿಯಲ್ಲಿ ಮತ್ತೊಮ್ಮೆ ಸಭೆ ಕರೆದು ಮಾತುಕತೆ ನಡೆಸುವುದಾಗಿ ಹೇಳಿ ರೈತರನ್ನು ಸಾಗ ಹಾಕಲಾಯಿತು.