ರಸಗೊಬ್ಬರ ಮಣ್ಣಿಗೆ ಮಾರಕ

04 kurugodu 02
Published on

ಕುರುಗೋಡು: ಬೆಳೆಗೆ ಬಾಧಿಸುವ ರೋಗ ನಿವಾರಣೆಗೆ ರೈತರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಮಾಹಿತಿ ಪಡೆಯಬೇಕು. ಈ ಮೂಲಕ ಬೇಸಾಯ ಮಾಡುವುದರಿಂದ ರೈತರು ನಷ್ಟ ಹೊಂದುವುದು ತಪ್ಪಲಿದೆ ಎಂದು ಹಗರಿ ಕೆವಿಕೆ ವಿಜ್ಞಾನಿ ಮಲ್ಲೇಶಪ್ಪ ಮಾಹಿತಿ ನೀಡಿದರು.

ಕಲ್ಲುಕಂಬ ಗ್ರಾಮ ಪಂಚಾಯಿತಿಯಲ್ಲಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬಳ್ಳಾರಿಯ ಹಗರಿ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಭೂ ಮತ್ತು ಜಲ ಸಂರಕ್ಷಣ ಸಂಸ್ಥೆ ಸಂಶೋಧನಾ ಕೇಂದ್ರ, ಕಂಪ್ಲಿಯ ಜಿಲ್ಲಾ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಬುಧವಾರ ಮಾತನಾಡಿದರು.

ತಾಲೂಕಿನಲ್ಲಿ ಮೆಣಸಿನಕಾಯಿ, ಅಂಜೂರ, ದಾಳಿಂಬೆ, ಭತ್ತವನ್ನು ಹೆಚ್ಚಾಗಿ ಬೆಳಯಲಾಗುತ್ತಿದೆ. ರೈತರು ಅಧಿಕ ಇಳುವರಿ ಪಡೆಯಲು ಅವೈಜ್ಞಾನಿಕವಾಗಿ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಕುಸಿಯುವ ಜತೆಗೆ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಕೊಟ್ಟಿಗೆ ಗೊಬ್ಬರ, ಜೀವಾಮೃತ ಹೆಚ್ಚಾಗಿ ಬಳಸುವಂತೆ ತಿಳಿಸಿದರು.

ಕೃಷಿ ವಿಜ್ಞಾನಿ ರವಿ ಮಾತನಾಡಿ, ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಅದಕ್ಕಾಗಿ ರೈತರು ರಾಸಾಯನಿಕ ಪದ್ಧತಿ ಬಿಟ್ಟು ಸಹಜ ಬೇಸಾಯದ ಕಡೆಗೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳಬೇಕು ಎಂದರು.

ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಅಭಿಲಾಶಿ, ಗ್ರಾಪಂ ಅಧ್ಯಕ್ಷ ಮಕಾಶಿ ಬಸವರಾಜ್, ಸದಸ್ಯರಾದ ಅಡ್ಡೆ ಶಿವಪ್ಪ, ಎಚ್ ಮಲ್ಲೇಶಪ್ಪ, ಅಧಿಕಾರಿಗಳಾದ ರಾಜೇಶ್ವರಿ, ಯೇಸುದಾಸ್, ದೇವರಾಜ್, ಪ್ರಮುಖರಾದ ಜಿ.ಪಂಪಣ್ಣ, ಜಿ.ನಾಗರಾಜ್, ಶಿವಪ್ಪ, ಪಂಪನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net