

ಹೊನ್ನಾಳಿ: ಹೊನ್ನಾಳಿ -ನ್ಯಾಮತಿ ತಾಲೂಕಿನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಅವಳಿ ತಾಲೂಕಿನಲ್ಲಿ ಕೃಷಿ ಬಿತ್ತನೆಗೆ ಭೂಮಿ ಹದ ಮಾಡಲಾಗಿದ್ದು ಬಿತ್ತನೆ ಮಾಡುವುದು ಮಾತ್ರ ಬಾಕಿ ಉಳಿದಿದೆ ಎಂದು ಹೊನ್ನಾಳಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ರೇವಣ್ಣಸಿದ್ದನಗೌಡ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹತ್ತು ದಿನಗಳಿಂದ ಸತತವಾಗಿ ಮಳೆಯಾಗಿದೆ. ರೈತರು ಅದಕ್ಕೂ ಮೊದಲೇ ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಕಾಯುತ್ತಿದ್ದರು. ಮಳೆ ಕೊಂಚ ಬಿಡುವು ನೀಡಿದ್ದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಅವಳಿ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರ, ಖಾಸಗಿ ಕೇಂದ್ರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಕೃಷಿಕರು ಖರೀದಿಸುತ್ತಿದ್ದಾರೆ. ರಸಗೊಬ್ಬರ ಅಥವಾ ಬಿತ್ತನೆ ಬೀಜಗಳನ್ನು ಖರೀದಿಸಿದಾಗ ತಪ್ಪದೇ ರಸೀದಿ ಪಡೆಯಿರಿ ಎಂದು ಮನವಿ ಮಾಡಿದರು.
ವಾಡಿಕೆಗಿಂತ ಹೆಚ್ಚು ಮಳೆ: ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೊನ್ನಾಳಿಯಲ್ಲಿ 165 ಮಿ.ಮೀ. ಬದಲು 293 ಮಿ.ಮೀ. ನ್ಯಾಮತಿಯಲ್ಲಿ 186 ಮಿ.ಮೀ.ಬದಲು 212 ಮಿ.ಮೀ. ಮಳೆ ದಾಖಲಾಗಿದೆ.
ಬೀಜ ಬಿತ್ತನೆ: ಮೆಕ್ಕೆಜೋಳ 6500 ಹೆಕ್ಟರ್, ಶೇಂಗಾ 370 ಹೆ., ಹತ್ತಿ 150 ಹೆ. ಹಾಗೂ ಸೊಯಾಬಿನ್ 15 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೊಂದು ವಾರದಲ್ಲಿ ಕೃಷಿ ಇಲಾಖೆಯ ಗುರಿಯಂತೆ 34,217 ಹೆ. ಪ್ರದೇಶದಲ್ಲಿ ಬೀಜ ಬಿತ್ತನೆಯಾಗಲಿದೆ ಎಂದು ತಿಳಿಸಿದರು.
ದ್ವಿದಳ ಧಾನ್ಯಗಳಾದ ತೊಗರಿ, ಅವರೆ, ಸೋಯಾಬಿನ್ ಹಾಗೂ ಅಲಸಂದಿ ಬೆಳೆಗಳನ್ನು ಬೆಳೆದರೆ ಅತೀ ಹೆಚ್ಚು ಆರ್ಥಿಕ ಲಾಭ ಪಡೆಯಬಹುದು. ಜತೆಗೆ ಮಣ್ಣಿನ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಫಲವತ್ತತೆ ಹೆಚ್ಚಾಗುತ್ತದೆ ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ಮಾತನಾಡಿ, ಅವಳಿ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕ, ಲಘು ಪೋಷಕಾಂಶಗಳನ್ನು ದಾಸ್ತಾನು ಮಾಡಲಾಗಿದೆ. ಅವಶ್ಯ ಎನ್ನಿಸಿದಾಗ ಔಷಧಗಳನ್ನು ಪಡೆಯಬಹುದು, ಅದಕ್ಕೂ ಮುನ್ನ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ನಂತರ ಔಷಧ ಕೊಳ್ಳಲು ಸಲಹೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ನಲ್ಲಿ ಡಿಎಪಿ, ಯುರಿಯಾ, 20 10 013 ಹಾಗೂ 15 15 15 ಸೇರಿ 250 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಸಾಕಷ್ಟು ರಸಗೊಬ್ಬರ ಸಾಕಷ್ಟು ತರುವ ವ್ಯವಸ್ಥೆಯನ್ನು ಶಾಸಕ ಡಿ.ಜಿ. ಶಾಂತನಗೌಡ ಮಾಡಿದ್ದಾರೆ ಎಂದು ಟಿಎಪಿಸಿಎಂಎಸ್ ಕಾರ್ಯದರ್ಶಿ ಮುರುಗೇಶ್ ತಿಳಿಸಿದರು.