ರಸಗೊಬ್ಬರ ದಂಧೆಕೋರರ ಪಾಲು?: ರೈತರಿಗೆ ನ್ಯಾಯ ಕೊಡದ ನಿಯಮಗಳು

1
Published on

ಮೂರ್ತಿ ಟಿ.ಸಿ.ಎಸ್​. ತಿಪಟೂರು

ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವ ರಸಗೊಬ್ಬರ ಕಾಳ ಸಂತೆಯಲ್ಲಿ ಹೋಗುವುದನ್ನು ತಪ್ಪಿಸಲು ಆಧಾರ್​ ಮಾನದಂಡ ಅನುಸರಿಸುತ್ತಿರುವುದು ಪರಿಣಾಮಕಾರಿಯಾಗುತ್ತಿಲ್ಲ.!

ಗೊಬ್ಬರದ ಅಂಗಡಿಗೆ ಹೋಗುವ ಎಲ್ಲರಿಗೂ, ಆತ ನಿಜವಾದ ರೈತನೇ, ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳದೆ ಕೇವಲ ಆಧಾರ್​ ನಂಬರ್​ ಮತ್ತು ಆತನ ಮೊಬೈಲಿಗೆ ಬರುವ ಒಟಿಪಿ ಆಧಾರದಲ್ಲಿ ಸಬ್ಸಿಡಿ ದರದ ರಸ ಗೊಬ್ಬರ ವಿತರಿಸಲಾಗುತ್ತಿದ್ದು, ಇದು ಅಕ್ರಮ ದಂಧೆಕೋರರಿಗೆ ಅನುಕೂಲಕರವಾಗಿದೆ. ಅವರಿವರಿಂದ ಸಂಗ್ರಹಿಸಿದ ಆಧಾರ್​ ಕಾರ್ಡ್​ ಸಲ್ಲಿಸಿ, ಸಬ್ಸಿಡಿ ದರದ ರಸ ಗೊಬ್ಬರ ಪಡೆದು, ಹೆಚ್ಚಿನ ಬೆಲೆಗೆ ಕೈಗಾರಿಕಾ ಉದ್ದೇಶಗಳಿಗೆ ಮಾರಿ ಹಣ ಮಾಡಿಕೊಳ್ಳಲು ಸುಲಭ ದಾರಿಯಾಗಿದೆ.

ಏಕೆಂದರೆ, ರಸ ಗೊಬ್ಬರ ಮಾರಾಟಗಾರರು, ಈತ ಅಸಲಿ ರೈತನೇ, ನಮ್ಮ ತಾಲೂಕಿನವನೇ? ಅಥವಾ ವ್ಯಾಪಾರಿಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳದೇ, ಕೇವಲ ಆಧಾರ್​ ಕಾರ್ಡ್​ ನಂಬರ್​ಗೆ ಪ್ರತಿಯಾಗಿ ರಿಯಾಯಿತಿ ದರದ ಗೊಬ್ಬರ ನೀಡುತ್ತಿರುವುದು ಅಕ್ರಮ ದಾಸ್ತಾನು, ಮತ್ತು ಮಾರಾಟಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

ಎಷ್ಟು ಸಬ್ಸಿಡಿ ಸಿಗುತ್ತೆ?: ಅನ್ನದಾತರ ನೆರವಿಗೆ ಬಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರಿಗೆ ನೆರವಾಗುವ ಸದುದ್ದೇಶದಿಂದ ಬೇವು ಲೇಪಿತ ಯೂರಿಯಾ, ಪೊಟ್ಯಾಷಿಯಂ, ಡಿಎಪಿ, 20:20 ಮುಂತಾದ ರಸ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ವ್ಯವಸ್ಥೆ ಮಾಡಿದೆ. ಆದರೆ ರೈತರಿಗೆ ನೀಡಲಾಗುವ ರಿಯಾಯಿತಿ ದರದ ರಸಗೊಬ್ಬರವನ್ನು ಸಂಗ್ರಹಿಸಿ, ಬೇವು ಲೇಪಿತ ಯೂರಿಯಾ ಗೊಬ್ಬರವನ್ನು ಸಂಸ್ಕರಿಸಿ, ಸೋಪು, ಶ್ಯಾಂಪು, ಸಿಡಿಮದ್ದು ತಯಾರಿಕೆ ಸೇರಿ ಇತರ ಕೈಗಾರಿಕಾ ಬಳಕೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ದಂಧೆ ಬಗ್ಗೆ ಸಾಕಷ್ಟು ಕೇಳಿಬರುತ್ತಿತ್ತು.

ಇದರಿಂದ ಎಚ್ಚೆತ್ತ ಸರ್ಕಾರ, ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಹಾಗೂ ರೈತ ಕೇಂದ್ರಗಳು/ಸೊಸೈಟಿಗಳಲ್ಲಿ ರಿಯಾಯಿತಿ ದರದ ರಸಗೊಬ್ಬರ ಪಡೆಯಬೇಕಾದರೆ ಆಧಾರ್​ ಕಾರ್ಡ್​ ಸಂಖ್ಯೆ ನಮೂದಿಸಿದ ತಕ್ಷಣ ಸಂಬಂಧಿಸಿದ ಮೊಬೈಲ್​ಗೆ ಬರುವ ಒಟಿಪಿ ಖಚಿತಪಡಿಸಿಕೊಂಡು ರಿಯಾಯಿತಿ ದರದಲ್ಲಿ ರಸ ಗೊಬ್ಬರ ವಿತರಿಸಲು ಸೂಚಿಸಿದೆ.

ಈ ವ್ಯವಸ್ಥೆಗಾಗಿ ಮಾರಾಟ ಮಳಿಗೆಗಳಲ್ಲಿ ಪಿಓಎಸ್​ (ಪಾಯಿಂಟ್​ ಆಫ್​ ಸೇಲ್​) ಯಂತ್ರ ಬಳಸಲಾಗುತ್ತಿದ್ದು. ಯಾರ ಆಧಾರ್​ ಕಾರ್ಡ್​ ಸಂಖ್ಯೆಗೆ ರಿಯಾಯಿತಿ ದರದ ರಸಗೊಬ್ಬರ ಮಾರಾಟ ಮಾಡಲಾಗಿದೆ ಎಂಬ ವಿವರ ರಸಗೊಬ್ಬರ ಮಾರಾಟ ಮಾಡಿದ ಕಂಪನಿ ಮತ್ತು ಸಂಬಂಧಿಸಿದ ಕೇಂದ್ರ ಸಚಿವಾಲಯದ ಇಲಾಖೆಗೆ ಹೋಗುತ್ತದೆ. ಇದರಿಂದಾಗಿ ಯಾವುದೇ ಕಾರಣಕ್ಕೂ ರಸ ಗೊಬ್ಬರದಲ್ಲಿ ಅಕ್ರಮ ಮಾರಾಟ ಸಾಧ್ಯವಿಲ್ಲ ಎಂಬ ಸಮಜಾಯಿಷಿ ನೀಡಿದೆ.

45 ಕೆಜಿ ತೂಕದ ಬೇವು ಲೇಪಿತ ಯೂರಿಯಾ ಸರಬರಾಜು ಮಾಡುವ ಕಂಪನಿ ಪ್ರತಿ ಚೀಲ ಗೊಬ್ಬರಕ್ಕೆ 1,506 ರೂಪಾಯಿ ನಿಗದಿಪಡಿಸಿದೆ. ಆದರೆ ರೈತರಿಂದ ಕೇವಲ 288ರೂ ಪಡೆದು ಬೇವು ಲೇಪಿತ ಯೂರಿಯಾ (45ಕೆಜಿ) ವಿತರಿಸಲಾಗುತ್ತಿದ್ದು, ಉಳಿಕೆ 1,218 ರೂಪಾಯಿ ಕೇಂದ್ರ ಸರ್ಕಾರ ನೇರವಾಗಿ ರಸಗೊಬ್ಬರ ತಯಾರಿಕಾ ಕಂಪನಿಗೆ ರೈತರ ಹೆಸರಿನಲ್ಲಿ ಭರಿಸುತ್ತಿದೆ. ಅಂದರೆ ರೈತ ಖರೀದಿಸುವ 45 ಕೆಜಿ ತೂಕದ ಪ್ರತಿ ಚೀಲ ಯೂರಿಯಾಕ್ಕೆ 1,218 ರೂ. ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ.

ಕೇವಲ ಆಧಾರ್​ ಸಂಖ್ಯೆಯಿಂದ ಸಾಧ್ಯವಾ?: ರೈತ, ತಾನು ಕಷ್ಟ ಪಟ್ಟು ಬೆಳೆದ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಹೋದರೆ, ರೈತನ ನೈಜತೆ, ಜಮೀನಿನ ಪಹಣಿ, ಆಧಾರ್​ ಕಾರ್ಡ್​, ಎಫ್​ಐಡಿ ಸಂಖ್ಯೆ ಇಷ್ಟೆಲ್ಲವನ್ನೂ ಪರಿಶೀಲಿಸಿ ರಾಗಿ ಖರೀದಿಸುವ ವ್ಯವಸ್ಥೆ ಮಾಡಿರುವ ಇದೇ ಸರ್ಕಾರ, ಕೇವಲ ಆಧಾರ್​ ನಂಬರ್​ಗೆ ಪ್ರತಿಯಾಗಿ ಪ್ರತಿ ಚೀಲಕ್ಕೆ 1,218 ರೂ. ಸಬ್ಸಿಡಿ ದರದ ಯೂರಿಯಾ ಗೊಬ್ಬರವನ್ನು ಕಂಡ, ಕಂಡವರಿಗೆಲ್ಲಾ ಖರೀದಿಸಲು ಅವಕಾಶ ಮಾಡಿಕೊಟ್ಟಿರುವುದಾರೂ ಹೇಗೆ ಎಂಬುದು ಆಶ್ಚರ್ಯವಾಗಿದೆ.

ಸಬ್ಸಿಡಿ ದರದ ರಸ ಗೊಬ್ಬರ ಖರೀದಿ ಮಾನದಂಡದ ಬಗ್ಗೆ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. > ಆರ್​.ಜಿ.ಚಂದ್ರಶೇಖರ್​, ತಹಸೀಲ್ದಾರ್​ ತಿಪಟೂರು. ಪ್ರಸಕ್ತ ಸನ್ನಿವೇಶದಲ್ಲಿ ರೈತ ಅಲ್ಲದೇ ಸಾರ್ವಜನಿಕರು, ಸರ್ಕಾರಿ ನೌಕರರು, ಲಾರಿ ಚಾಲಕರು, ಅನ್ಯ ಜಿಲ್ಲೆ ಅಥವಾ ತಾಲೂಕಿನವರು ಆಧಾರ್​ ಹೊಂದಿರುವ ಯಾರು ಬೇಕಾದರೂ ರಿಯಾಯಿತಿ ದರದ ರಸಗೊಬ್ಬರ ಖರೀದಿಸಬಹುದು. ರಾಗಿ ಖರೀದಿಯಲ್ಲಿ ಅನುಸರಿಸಲಾಗುತ್ತಿರುವ ಆಧಾರ್​&ಎಫ್​ಐಡಿ ಮತ್ತು ಪಹಣಿ ನಿಯಮಗಳನ್ನು ಇಲ್ಲೂ ಅನುಸರಿಸಿದರೆ ಅಕ್ರಮ ತಡೆಗಟ್ಟಬಹುದು. ಬೆಳೆ ಆಧಾರದಲ್ಲಿ ರಸ ಗೊಬ್ಬರ ವಿತರಿಸುವುದು ಸೂಕ್ತ. > ಹೆಸರು ಹೇಳಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net