ರಸಗೊಬ್ಬರ ತಂದ ಗೂಡ್ಸ್ ರೈಲಿಗೆ ಪೂಜೆ

26rajesh7
Published on

ಚಾಮರಾಜನಗರ: ಮಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ರಸಗೊಬ್ಬರ ಸಾಗಣೆ ಮಾಡಿದ ಗೂಡ್ಸ್ ರೈಲಿಗೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಶನಿವಾರ ಪೂಜೆ ಸಲ್ಲಿಸಿದರು.

ನಗರದ ರೈಲ್ವೆ ನಿಲ್ದಾಣಕ್ಕೆ ಮಂಗಳೂರಿನಿಂದ 10 ಬೋಗಿಗಳಲ್ಲಿ ರಸಗೊಬ್ಬರ ತುಂಬಿಕೊಂಡು ಗೂಡ್ಸ್ ರೈಲು ಆಗಮಿಸಿತು. ಈ ಸಂದರ್ಭದಲ್ಲಿ ರೈಲ್ವೆ ಸಮಿತಿ ಸದಸ್ಯ ವಿ.ಪ್ರಭಕರ್ ಮಾತನಾಡಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಒಳ್ಳೆಯ ಉದ್ದೇಶದಿಂದ ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಡಿತರ ಮಾತ್ರ ಸಾಗಣೆ ಮಾಡುತ್ತೀರಿ, ರಸಗೊಬ್ಬರ ಸಾಗಣೆ ಏಕೆ ಮಾಡುತ್ತಿಲ್ಲ ಎಂದು ಗಮನ ಸೆಳೆದ ಪರಿಣಾಮದಿಂದ ಇಂದು ರಸಗೊಬ್ಬರ ಸಾಗಣೆ ಆಗಿದೆ. ಇನ್ನೂ ಮುಂದೆ ನಿರಂತರವಾಗಿ ರಸಗೊಬ್ಬರ ಸಾಗಣೆ ಮಾಡಲಾಗುತ್ತದೆ. ಲಾರಿ ಮಾಲೀಕರು, ಕಾರ್ಮಿಕರು ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲೆಯಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬಂದರೆ ಹೆಚ್ಚಿನ ಬೋಗಿಗಳು, ರೈಲು ಕೇಳಬಹುದು. ಜಿಲ್ಲೆಯಿಂದ ರೈಲು ಇಲಾಖೆಗೆ ಆದಾಯ ಕಡಿಮೆ ಇದೆ. ಜಿಲ್ಲೆಗೆ ಹೆಚ್ಚಿನ ಸಾಗಣಿಕೆ ತರಿಸಿದರೆ ಆದಾಯ ಬರುತ್ತದೆ. ಆಗ ಇತರೆ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಮೈಸೂರು ಇನ್ನಿತರೆ ಕಡೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಏನಾದರೂ ರೈಲ್ವೆ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಸರಿಪಡಿಸಲಾಗುವುದು ಎಂದರು.

ರಸಗೊಬ್ಬರ ಮಾರಾಟಗಾರ ಸಂಘದ ಅಧ್ಯಕ್ಷ ಯೋಗರಾಜ್ ಮಾತನಾಡಿ, ಮಂಗಳೂರನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ಗೂಡ್ಸ್ ರೈಲು ಮೂಲಕ ರಸಗೊಬ್ಬರ ತಂದಿರುವುದು ರೈತರು ಮತ್ತು ರಸಗೊಬ್ಬರ ಮಾರಾಟಗಾರರಿಗೆ ಅನುಕೂಲವಾಗಿದೆ. ಇದರಿಂದ ಸಾಗಾಣಿಕೆ ವೆಚ್ಚ, ಸಮಯ ವ್ಯಯವಾಗುತ್ತಿದ್ದು ಮಾರಾಟಗಾರರಿಗೆ ಹೊರೆಯಾಗುತ್ತಿತ್ತು. ರಸಗೊಬ್ಬರ ಕೊರತೆ ಎದುರಾಗುತ್ತಿತ್ತು. ಆದರೆ ಈಗ ಆ ಸಮಸ್ಯೆಗಳು ತಲೆ ದೂರುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂಸಿಎಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್, ಲಾಜಿಸ್ಟಿಕ್ ಯೆರಿಸ್ವಾಮಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಯಾವುಲ್ಲಾ, ಕಾರ್ಮಿಕರ ಸಂಘದ ಆನಂದ್, ಡೀಲರ್ಸ್‌ಗಳಾದ ರವಿ, ಮಹೇಶ್, ಬಾಬು, ವೇಣು, ಪ್ರಸಾದ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net