ರೈತರಿಗೆ ಶಾಪವಾದ ಎಲೆ ಸುರುಳಿ ಕೀಟಬಾಧೆ

Rmgm-Ph-05-Resme-Ele Surali -Roga-Story-Photo-Keeeta Thota-30-6-2024
Published on

* ರೇಷ್ಮೆಗೆ ಬೆಲೆ ಇಲ್ಲದೇ ಬೆಳೆಗಾರ ಪಾಲಿಗೆೆ ಶಾಪ

* ಸೊಪ್ಪಿನ ಇಳುವರಿ ಕುಂಠಿತ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಿಲ್ಲೆಯ ರೇಷ್ಮೆ ಬೆಳೆಗಾರ ರೈತರ ಪಾಲಿಗೆೆ ಎಲೆ ಸುರುಳಿ ಕೀಟಬಾಧೆ ಶಾಪವಾಗಿ ಪರಿಣಮಿಸಿದ್ದು, ಕೀಟಬಾಧೆ ದಿನೇದಿನೆ ಹೆಚ್ಚುತ್ತಿರುವ ಕಾರಣ ರೇಷ್ಮೆ ಬೆಳೆಗಾರರು ನಷ್ಟದ ಸುಳಿಗೆ ಸಿಲುಕುವಂತಾಗಿದೆ.

ರೇಷ್ಮೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಯನ್ನೇ ನಂಬಿ ಹಲವರು ಜೀವನ ಕಟ್ಟಿಕೊಂಡಿದ್ದಾರೆ. ರೇಷ್ಮೆ ಬೆಳೆಗೆ ಬೆಲೆ ಸಿಗದಿರುವುದರ ನಡುವೆ ರೇಷ್ಮೆ ತೋಟಗಳಿಗೆ ಎಲೆ ಸುರುಳಿ ಕೀಟಬಾಧೆ ಮತ್ತು ತುಕ್ರಾ (ಥ್ರಿಪ್ಟ್) ರೋಗ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ.

ರಾಮನಗರ ತಾಲೂಕಿನ ಕೈಲಾಂಚ, ಬಿಡದಿ, ಕಸಬಾ ಹೋಬಳಿಯ ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಕೀಟಬಾಧೆ ಕಾಣಿಸಿಕೊಂಡು ರೋಗ ನಿಯಂತ್ರಣಕ್ಕೆ ಬಾರದಂತಾಗಿದೆ.

ರೇಷ್ಮೆ ಸೊಪ್ಪಿನ ಸುಳಿ ತಿನ್ನುವ ಕೀಟಗಳು ಎಲೆಗಳು ಬೆಳೆಯದಂತೆ ಮಾಡುತ್ತಿವೆ. ಇಡೀ ತೋಟ ರೋಗಪೀಡಿತವಾಗಿ ಸೊಪ್ಪಿನ ಇಳುವರಿ ಕುಂಠಿತವಾಗಿದೆ. ಅನಿವಾರ್ಯವಾಗಿ ಇದೇ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡುತ್ತಿರುವ ಕಾರಣ ಹಲವು ರೋಗ ಕಾಣಿಸಿಕೊಳ್ಳುತ್ತಿವೆ. ಎಲೆ ಸುರುಳಿ ಕೀಟಬಾಧೆಯಿಂದ 100 ಮೊಟ್ಟೆ ಚಾಕಿ ಹುಳು ಬೆಳೆಯುವ ತೋಟದಲ್ಲಿ ಇಂದು 50 ಮೊಟ್ಟೆ ಚಾಕಿ ಹುಳು ಬೆಳೆಯಲೂ ಆಗದ ಸನ್ನಿವೇಶ ಎದುರಾಗಿದೆ. ರೇಷ್ಮೆ ಇಲಾಖೆ ರೋಗ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಿ ಬೇವಿನ ಎಣ್ಣೆ, ಔಷಧವನ್ನು ಉಚಿತವಾಗಿ ನೀಡಿ ರೈತರಿಗೆ ಆರ್ಥಿಕ ನಷ್ಟ ತಪ್ಪಿಸಬೇಕು. ಜತೆಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎನ್ನುತ್ತಾರೆ ರೇಷ್ಮೆ ಬೆಳೆಗಾರ ರೈತ ಲಕ್ಕೋಜನಹಳ್ಳಿಯ ಸಂತೋಷ್.

ರೋಗ ಲಕ್ಷಣ

ಎಲೆ ಸುರಳಿ ಕೀಟ ಒಂದು ಬಾರಿಗೆ 300 ರಿಂದ 350 ಮೊಟ್ಟೆ ಇಡುತ್ತದೆ. ಆದರೆ, ಒಂದು ಗಿಡದಲ್ಲಿ ಒಂದು ಅಥವಾ ಎರಡು ಮೊಟ್ಟೆಗಳನ್ನು ರೇಷ್ಮೆ ಸೊಪ್ಪಿನ ಸುಳಿ ಭಾಗದಲ್ಲಿ ಇಡುತ್ತದೆ. ಮೊಟ್ಟೆ ಒಡೆದು ಕೀಟ ಹೊರಬಂದು ಸುಳಿ ತಿನ್ನುತ್ತದೆ. ಇದರಿಂದ ಸೊಪ್ಪಿನ ಇಳುವರಿ ಕುಂಠಿತವಾಗುತ್ತದೆ. ಚಿಟ್ಟೆ ತೋಟದಿಂದ ತೋಟಕ್ಕೆ ಹರಡಿ ಇಡೀ ತೋಟವನ್ನು ಕೀಟಗಳು ಆವರಿಸುತ್ತವೆ. ಪ್ರಾರಂಭಿಕ ಹಂತದಲ್ಲೇ ಕೀಟ ಕಂಡಾಗ ಆ ರೇಷ್ಮೆ ಕಡ್ಡಿಯನ್ನು ಬುಡದವರೆಗೆ ಕತ್ತರಿಸಿ ಸುಡಬೇಕು. ಇದರಿಂದ ಬೇರೆ ಗಿಡಗಳಿಗೆ ಕೀಟ ಹರಡುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಅಧಿಕಾರಿಗಳು.

ತುಕ್ರಾ (ಥ್ರಿಪ್ಸ್) ರೋಗಬಾಧೆ

ಕೈಲಾಂಚ ಹೋಬಳಿಯ ಗುನ್ನೂರು ಭಾಗದಲ್ಲಿ ಎಲೆ ಸುರುಳಿ ಕೀಟಬಾಧೆ ಜತೆಗೆ ತುಕ್ರಾ (ಥ್ರಿಪ್ಸ್) ರೋಗವೂ ಕೆಲವೊಂದು ರೈತರ ತೋಟಗಳಲ್ಲಿ ಕಾಣಿಸಿಕೊಂಡಿದ್ದು, ಎಲೆಗಳೆಲ್ಲ ಸುರಳಿ ಆಕಾರದಲ್ಲಿ ಸುತ್ತಿ ಸೊಪ್ಪಿನ ಬೆಳವಣಿಗೆ ಇಲ್ಲದೆ ರೇಷ್ಮೆ ಕಡ್ಡಿ ಗಂಟು ಗಂಟಾಗುತ್ತಿವೆ.

ಔಷಧ ಸಿಂಪಡಿಸಲು ಸಲಹೆ

ಎಲೆ ಸುರುಳಿ ಕೀಟಬಾಧೆಗೆ ಇಂಟ್ರೆಫಿಡ್ ಕ್ಲೋರ್ಫೆನಾಫಿರ್ ಶೇ.10, 1.5 ಮಿಲಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ತುಕ್ರಾ (ಥ್ರಿಪ್ಸ್) ರೋಗಬಾಧೆಗೆ ಡಾಮಿನೆಂಟ್ ಡಿನೋಟಿಫಿರಾನ್ ಶೇ.20, 0.25 ಗ್ರಾಂ. ಒಂದು ಲೀಟರ್ ನೀರಿಗೆ ಔಷಧ ಬೆರೆಸಿ ಸಿಂಪಡಣೆ ಮಾಡಬೇಕು.

ಎಲೆ ಸುರುಳಿ ಕೀಟಬಾಧೆ ಮತ್ತು ತುಕ್ರಾ (ಥ್ರಿಪ್ಸ್) ರೋಗಬಾಧೆಗೆ ಬೇವಿನ ಎಣ್ಣೆ ಪ್ರಮುಖ ಔಷಧ. ಕಡ್ಡಿ ಕಟಾವು ಮಾಡಿದ 25 ದಿನಗಳ ನಂತರ ಸಿಂಪಡಣೆ ಮತ್ತು ಆ ನಂತರ 7ನೇ ದಿನಕ್ಕೆ ಬೇವಿನ ಎಣ್ಣೆ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ. ನಂತರ 7ನೇ ದಿನಕ್ಕೆ ಸೊಪ್ಪು ಕೊಯ್ಲು ಮಾಡಬಹುದು. ರೋಗ ಹತೋಟಿಗೆ ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರ, ನೀರು ನೀಡಿ ಉತ್ತಮ ವ್ಯವಸಾಯ ಕ್ರಮ ಅನುಸರಿಸಿದರೆ ರೋಗ ಕಡಿಮೆ ಅಗತ್ಯ ಮಾಹಿತಿ ರೈತರಿಗೆ ಬೇಕಾದರೆ ನನ್ನ ಮೊಬೈಲ್ ಸಂಖ್ಯೆ 7892259114 ಗೆ ಕರೆ ಮಾಡಿ ತಿಳಿಯಬಹುದು ಉಮೇಶ್, ರೇಷ್ಮೆ ಅಧಿಕಾರಿ.
ನೂರು ಮೊಟ್ಟೆ ಚಾಕಿ ಹುಳುಗಳಿಗೆ 6500 ರಿಂದ 7000 ಸಾವಿರ ರೂ. ಖರೀದಿ ದರವಿದೆ. 100 ಮೊಟ್ಟೆ ರೇಷ್ಮೆ ಬೆಳೆ ಬೆಳೆಯಲು ಕಾರ್ಮಿಕರ ಕೂಲಿ ಸೇರಿ 20 ಸಾವಿರ ರೂ.ವರೆಗೆ ಖರ್ಚು ಬರುತ್ತದೆ. ಸರಾಸರಿ ಯಾವುದೇ ರೋಗವಿಲ್ಲದೆ ಬೆಳೆ ಬೆಳೆದರೆ 100 ಕೆಜಿ ರೇಷ್ಮೆ ಬೆಳೆದು 40 ಸಾವಿರವರೆಗೂ ಆದಾಯಗಳಿಸಬಹುದು. ಆದರೆ ಸೊಪ್ಪು ಇಳುವರಿ ಕುಂಠಿತವಾಗಿ ರೇಷ್ಮೆ ಬೆಳೆಗಳಲ್ಲಿ ರೋಗ ಕಾಣಿಸಿಕೊಂಡು ಚಾಕಿ ಮರಿ ಖರ್ಚು, ಕೂಲಿವೆಚ್ಚ ಕೂಡ ಬರುತ್ತಿಲ್ಲ. ಲಿಂಗರಾಜು, ರೇಷ್ಮೆ ಬೆಳೆಗಾರ
ಎಲೆ ಸುರಳಿ ಕೀಟ ಬಾಧೆ ಮತ್ತು ಥ್ರಿಪ್ಸ್ ರೋಗ ರೇಷ್ಮೆ ಬೆಳೆಗಾರ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸೊಪ್ಪು ಇಳುವರಿ ಕುಂಠಿತವಾಗಿದೆ. ಕೀಟಬಾಧೆ ತಗುಲಿರುವ ಸೊಪ್ಪನ್ನೇ ಹುಳುಗಳಿಗೆ ಹಾಕುವ ಕಾರಣ ಹೆಚ್ಚಿನ ರೇಷ್ಮೆ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಚಾಕಿ ದರವೂ ದುಪ್ಪಟ್ಟಾಗಿದ್ದು, ರೇಷ್ಮೆಗೆ ಸರಿಯಾದ ದರ ಸಿಗದೆ ರೈತರು ಹೈರಾಣಾಗುವಂತಾಗಿದೆ. ಮಹದೇವಯ್ಯ, ರೇಷ್ಮೆಬೆಳೆಗಾರ, ಗುನ್ನೂರು.
ಎಲೆ ಸುರಳಿ ಕೀಟ ಬಾಧೆ ತುಕ್ರಾ (ಥ್ರಿಪ್ಸ್) ರೋಗ ಹತೋಟಿಗೆ ರೈತರು ಕೈಗೊಳ್ಳುವ ಕ್ರಮಗಳ ಬಗ್ಗೆ ರೈತರ ತೋಟಗಳಿಗೆ ಹೋಗಿ ಔಷಧ ಸಿಂಪಡಣೆ ರೋಗ ಹತೋಟಿ ಕ್ರಮಗಳ ಬಗ್ಗೆ ರೇಷ್ಮೆ ಇಲಾಖೆ ತರಬೇತಿ ಕಾರ್ಯಕ್ರಮಗಳ ಮೂಲಕವೂ ರೇಷ್ಮೆ ಹಿರಿಯ ವಿಜ್ಞಾನಿಗಳಿಂದ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ರೈತರಿಗೆ 45ಕ್ಕೂ ಹೆಚ್ಚು ಗುಂಪಿನಲ್ಲಿ ತರಬೇತಿ ನೀಡಲಾಗಿದೆ. ಕೆಲವೊಂದು ಪ್ರದೇಶದಲ್ಲಿ ಮಾತ್ರ ಕೀಟಬಾಧೆ ಕಂಡುಬಂದಿದೆ. ಸೂಕ್ತ ಔಷಧ ಸಿಂಪಡಣೆ ನಡೆಸಿದರೆ ಕೀಟ ಬಾಧೆ ನಿಯಂತ್ರಣಕ್ಕೆ ಬರುತ್ತದೆ. ಉಮೇಶ್, ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net