

ಚಿತ್ರದುರ್ಗ; ಸಂಗೊಳ್ಳಿ ರಾಯಣ್ಣ ದೇಶಕಂಡ ಮಹಾನ್ ದೇಶಭಕ್ತ. ಕಿತ್ತೂರು ರಾಣಿ ಚೆನ್ನಮ್ಮನ ನಿಷ್ಠಾವಂತ ಯೋಧನಾಗಿದ್ದ ಆತ, ಆಕೆಯ ಪಾಲಿನ ಮಗನಂತೆ ಇದ್ದ ಎಂದು ನಿವೃತ್ತ ಯೋಧ ಮಹೇಶ್ ಹೇಳಿದರು.
ವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಯಣ್ಣ ಜನ್ಮದಿನ ಹಾಗೂ ಸ್ವಾತಂತ್ರೊೃೀತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಯಣ್ಣನಲ್ಲಿನ ಹೋರಾಟದ ಕಿಚ್ಚು, ದೇಶಾಭಿಮಾನ, ಗೆಲ್ಲಬೇಕೆಂಬ ಛಲ ಈ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಸಾಧನೆ ಹಾದಿಯಲ್ಲಿ ಅಳವಡಿಕೊಳ್ಳಬೇಕು. ಅನೇಕ ಸಮಸ್ಯೆಗಳ ಮಧ್ಯೆಯೂ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ವಹಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹುದ್ದೆ ಜತೆಗೆ ಗೌರವ ಗಳಿಸಲು ಕಠಿಣ ಶ್ರಮ, ಅಧ್ಯಯನ ಜೀವನದ ಅಂಗವಾಗಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ದೇಶಕ್ಕೆ ಸ್ವತಂತ್ರ ಲಭಿಲಸಲು ಲಕ್ಷಾಂತರ ಮಂದಿ ಚಳವಳಿಯಲ್ಲಿ ಪಾಲ್ಗೊಂಡು ತಮ್ಮ ಬದುಕನ್ನೇ ಅರ್ಪಿಸಿದ್ದಾರೆ. ಅವರ ಆಶಯ ಅರಿತು ಭವ್ಯ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.
ಸಮಾಜಕ್ಕೆ ಏನು ಕೊಡದಿದ್ದರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರಮದಿಂದ ಓದಿ, ಉನ್ನತ ಹುದ್ದೆಗೆ ತಲುಪಿ ಪಾಲಕರಿಗೆ ಗೌರವ ತರುವ ಕೆಲಸ ಮಾಡಿದರೆ ಅದು ನೀವು ಸಮಾಜಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದರು.
ವೇದಿಕೆ ಅಧ್ಯಕ್ಷ ಟಿ.ಆನಂದ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಶಿಕ್ಷಕಿ ಆಶಾ, ಪೈಲ್ವಾನ್ ತಿಪ್ಪೇಸ್ವಾಮಿ, ಮಮತಾ, ರೂಪಾ ಇತರರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.