

ಶಿಕಾರಿಪುರ: ಲೋಕಸಭೆ ಮಾಜಿ ಸದಸ್ಯ ರಮೇಶ್ ಕತ್ತಿ ಅವರು ವಾಲ್ಮೀಕಿ ನಾಯಕ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಶನಿವಾರ ಪ್ರತಿಭಟನೆ ನಡೆಸಿ ಡಿವೈಎಸ್‌ಪಿ ಕೇಶವ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು. ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜವಾಗಿದೆ. ಈ ಸಮಾಜದ ಕೊಡುಗೆ ಅಪಾರ. ಇಂತಹ ಸಮಾಜದ ಬಗ್ಗೆ ರಮೇಶ್ ಕತ್ತಿಯವರು ಹೀಗೆ ಮಾತನಾಡುವುದು ಸರಿಯಲ್ಲ ಎಂದರು.
ಯಾವುದೇ ಸಮಾಜದ ಬಗ್ಗೆ ಮಾತನಾಡುವಾಗ ವಿವೇಚನೆ ಕಳೆದುಕೊಳ್ಳಬಾರದು. ರಮೇಶ್ ಕತ್ತಿಯವರು ಹೀಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಸಮಾಜದ ಬಂಧುಗಳಾದ ನಮಗೆ ನೋವಾಗಿದೆ. ಅವರು ತಕ್ಷಣ ಸಮಾಜಬಾಂಧವರಲ್ಲಿ ಕ್ಷಮೆ ಕೇಳಬೇಕು ಎಂದು ಹೇಳಿದರು.
ಸಮಾಜದ ಕಾರ್ಯದರ್ಶಿ ಸುರೇಶ, ಮುಖಂಡರಾದ ಉಮೇಶ್ ಮಾರವಳ್ಳಿ, ಸುರೇಶ್ ನಿಂಬೆಗೊಂದಿ, ಸಿದ್ದಪ್ಪ, ಕರಿಬಸಪ್ಪ, ವೀರೇಶ್ ಚಿಕ್ಕಜೋಗಿಹಳ್ಳಿ, ಸುರೇಶ್ ಭದ್ರಾಪುರ, ಪ್ರಕಾಶ್, ಮಲ್ಲಿಕಾರ್ಜುನ್ ಪರಶುರಾಮ್, ಅವಿನಾಶ್, ಲೋಕಪ್ಪ ನಾಗೇಹಳ್ಳಿ ಇತರರಿದ್ದರು.