

ಹುಬ್ಬಳ್ಳಿ: ಕರೊನಾ ಮಹಾಮಾರಿಯು ವ್ಯಾಪಕವಾಗಿ ಹರಡುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರವೂ ಪ್ರಮುಖವಾದುದಾಗಿದೆ. ರೋಗಿಗಳ ಆರೈಕೆಗಾಗಿ ಮಜೇಥಿಯಾ ಫೌಂಡೇಷನ್ ಸುಸಜ್ಜಿತ ಕಟ್ಟಡ ನಿರ್ವಿುಸಿಕೊಟ್ಟಿರುವುದು ಸಂತೋಷದ ಸಂಗತಿ, ಇದು ರಾಜ್ಯಕ್ಕೇ ಮಾದರಿ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಯ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನೆ ಸಂಸ್ಥೆ ಆವರಣದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ನಿರ್ವಿುಸಲಾದ 60 ಹಾಸಿಗೆಯ ಕೋವಿಡ್ ಆರೋಗ್ಯ ಕೇಂದ್ರ ‘ರಮಿಲಾ ಪ್ರಶಾಂತಿ ಮಂದಿರ’- ಹಾಸ್ಪೈಸ್ ಪ್ರೊಜೆಕ್ಟ್ಅನ್ನು ಶುಕ್ರವಾರ ಸಂಸ್ಥೆಗೆ ಹಸ್ತಾಂತರ ಮಾಡಿ ಅವರು ಮಾತನಾಡಿದರು.
ಕರೊನಾ ಸೋಂಕು ಕಾಲಿಟ್ಟ ಸಂದರ್ಭದಲ್ಲಿ ಎಲ್ಲಿಯೂ ಬೆಡ್ ವ್ಯವಸ್ಥೆ ಇರಲಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ರ್ಚಚಿಸಿದ ನಂತರ ಈಗ ಸುಮಾರು 750 ಬೆಡ್ಗಳು ಲಭ್ಯವಾಗಿವೆ. ಕಿಮ್ಸ್ನಲ್ಲೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಬೆಡ್ಗಳು ಈಗ ಕರೊನಾ ರೋಗಿಗಳ ಚಿಕಿತ್ಸೆಗೆ ಲಭ್ಯವಾಗಿವೆ ಎಂದರು.
ಮಜೇಥಿಯಾ ಫೌಂಡೇಷನ್ ಈ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ರಮಿಲಾ ಪ್ರಶಾಂತಿ ಮಂದಿರ ರೆಸಾರ್ಟ್ ಮಾದರಿಯಲ್ಲಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ, ವಸತಿ ಸಿಗಲಿದೆ ಎಂದರು.
ಖಾಸಗಿ ಆಸ್ಪತ್ರೆ, ಹೋಟೆಲ್ಗಳಲ್ಲಿ ಇನ್ನಷ್ಟು ಸೇವೆಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಮಾತುಕತೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೋಗ ಲಕ್ಷಣ ಇಲ್ಲದ ಪಾಸಿಟಿವ್ ಕೇಸ್ಗಳಿಗೆ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲು ಅನುಕೂಲವಾಗಲಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಹಾಸ್ಪೈಸ್ ಇರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಮಾಜಕ್ಕೆ ಏನಾದರೂ ವಿಶಿಷ್ಟ ಕೊಡುಗೆ ನೀಡಬೇಕೆಂಬ ಆಶಯದಿಂದ ಈ ಕೇಂದ್ರ ಆರಂಭಿಸಲಾಗಿದೆ ಎಂದರು.
ಮುಂಬೈ ಮತ್ತಿತರ ಕಡೆಗಳಲ್ಲಿ ಹಾಸ್ಪೈಸ್ ಕೇಂದ್ರಗಳನ್ನು ನೋಡಿ ಅದೇ ಮಾದರಿಯಲ್ಲಿ ನಿರ್ವಿುಸಲಾಗಿದೆ. ನನ್ನ ಮಡದಿ ರಮಿಲಾಗೆ ಕಿಮ್ಸ್ನಲ್ಲಿ ಅತ್ಯುತ್ತಮ ಚಿಕಿತ್ಸೆ ಲಭಿಸಿತು. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟೊಂದು ಉತ್ತಮ ಸೇವೆ ಸಿಗುತ್ತಿರುವಾಗ ನಾವೂ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಅವರ ಹೆಸರಲ್ಲಿ ಪ್ರಶಾಂತಿ ಮಂದಿರ ಕಟ್ಟಿ ಕೊಟ್ಟಿದ್ದೇವೆ. ಇಲ್ಲಿಗೆ ಬರುವವರಿಗೆ ಧಾರ್ವಿುಕ ಭಾವನೆ ಬರಬೇಕು. ಅಂತಹ ವಾತಾವರಣ, ಮಾನವೀಯ ಸೇವೆ ಲಭಿಸಬೇಕು ಎಂದರು.
ಈ ವರ್ಷ ಗಣೇಶೋತ್ಸವಕ್ಕೆ ವೆಚ್ಚ ಮಾಡುತ್ತಿದ್ದ ಹಣವನ್ನು ಇಂಥ ಸೇವಾ ಕಾರ್ಯಗಳಿಗೆ ಬಳಸುವ ಬಗ್ಗೆ ಸಮಿತಿ ಸಭೆಗಳಲ್ಲಿ ರ್ಚಚಿಸಲಾಗಿದೆ. ಹಲವಾರು ಸಂಘ- ಸಂಸ್ಥೆಗಳು ಅವಳಿ ನಗರದ ಅಭಿವೃದ್ಧಿಗೆ ಸಿದ್ಧವಾಗಿವೆ. ಅವುಗಳ ಸಹಾಯ ಪಡೆದು ಸಮಗ್ರ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಮಜೇಥಿಯಾ ಮನವಿ ಮಾಡಿದರು.
ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನೆ ಸಂಸ್ಥೆಯ ಚೇರ್ಮನ್ ಡಾ. ಬಿ.ಆರ್. ಪಾಟೀಲ್ ಮಾತನಾಡಿ, ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ ಕರೊನಾ ಸೋಂಕಿತರಿಗೆ ಬೆಡ್ ಮೀಸಲಿಡಬೇಕೆಂಬ ಸರ್ಕಾರದ ಸೂಚನೆಯನ್ನೂ ಪಾಲಿಸಿದ್ದೇವೆ. ಸಂಸ್ಥೆಯು ಇಂತಹ ಸೇವಾ ಕಾರ್ಯಕ್ಕೆ ಮುಂದಾದಾಗಲೆಲ್ಲ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸೇರಿ ಹಲವು ದಾನಿಗಳು ನಮಗೆ ಸಹಾಯ ಮಾಡುತ್ತ ಬಂದಿದ್ದಾರೆ ಎಂದು ಪ್ರಶಂಸಿಸಿದರು.
ಕರೊನಾ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಸಿಬ್ಬಂದಿ ಆರೋಗ್ಯ ಕಾಪಾಡಿಕೊಳ್ಳುವುದೂ ನಮಗೆ ಸವಾಲಿನ ಕೆಲಸವಾಗಿತ್ತು. ವಿಶೇಷ ಎಂದರೆ 18ಕ್ಕೂ ಹೆಚ್ಚು ಪ್ಲಾಸ್ಮಾ ಟ್ರಾನ್ಸಮಿಷನ್ ಚಿಕಿತ್ಸೆ ನೀಡುವ ಮೂಲಕ ಸೋಂಕಿತರನ್ನು ಗುಣಮುಖ ಮಾಡಲಾಗಿದೆ ಎಂದರು.
ಕ್ಯಾನ್ಸರ್ ಆಸ್ಪತ್ರೆಯಲ್ಲಿನ ರೋಗಿಗಳಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿರುವ ಮೆಟ್ರೊಪೋಲಿಸ್ ಹೋಟೆಲ್ ಸೇವೆ ಶ್ಲಾಘಿಸಲಾಯಿತು.
ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ, ಹಾಸ್ಪೈಸ್ ಆಡಳಿತ ನಿರ್ದೇಶಕರಾದ ಡಾ. ಕೆ. ರಮೇಶಬಾಬು, ಎಚ್.ಆರ್. ಪ್ರಲ್ಹಾದರಾವ್, ಸಂಜೀವ ಜೋಶಿ, ಡಾ. ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಸಾಮಾಜಿಕ ಮುಖಂಡರಾದ ಸುಭಾಸಸಿಂಗ್ ಜಮಾದಾರ, ಮಹೇಂದ್ರ ಸಿಂಘಿ, ಇತರರು ಇದ್ದರು.